ಬೆಂಗಳೂರು: ‘ವಿಶ್ವವಿದ್ಯಾಲಯದ ಆರೋಗ್ಯ ಕಾರ್ಯಕ್ರಮದಡಿ ರಾಜ್ಯದ ಗ್ರಾಮೀಣ ಭಾಗದ ಜನರ ಆರೋಗ್ಯ ತಪಾಸಣೆ ಮತ್ತು ಜಾಗೃತಿಗೆ ಕುಟುಂಬಗಳನ್ನು ದತ್ತು ಪಡೆಯುವ ಯೋಜನೆ ಜಾರಿಗೊಳಿಸಲಾಗುತ್ತಿದೆ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ತಿಳಿಸಿದರು.
ವಿಶ್ವ ಅಧಿಕ ರಕ್ತದೊತ್ತಡ ದಿನದ ಅಂಗವಾಗಿ ವಿಶ್ವವಿದ್ಯಾಲಯವು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಜಯದೇವ ಹೃದ್ರೋಗ ಸಂಸ್ಥೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಪಾಲಿಸಿ ರಿಸರ್ಚ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
‘ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವುದು ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ವಿಶ್ವವಿದ್ಯಾಲಯದಡಿ 1,400ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಮನೆ ಮನೆಗೆ ತೆರಳಿ ತಪಾಸಣೆ ಮಾಡುತ್ತಾರೆ. ಪ್ರತಿಯೊಬ್ಬರೂ ಕನಿಷ್ಠ 8ರಿಂದ 9 ಜನರ ಆರೋಗ್ಯ ತಪಾಸಣೆ ನಡೆಸಿ, ಅವರಿಗೆ ವೈದ್ಯಕೀಯ ಸಲಹೆ ನೀಡುತ್ತಾರೆ. ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಅಪೌಷ್ಟಿಕತೆ ತಡೆಗೆ ಒತ್ತು ನೀಡಲಾಗುತ್ತದೆ’ ಎಂದು ಹೇಳಿದರು.
‘ಇತ್ತೀಚೆಗೆ ಯುವಕರಲ್ಲಿ ಹೆಚ್ಚಾಗಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆರಂಭಿಕ ಹಂತದಲ್ಲಿಯೇ ಸಮಸ್ಯೆಯನ್ನು ಗುರುತಿಸಿ, ಚಿಕಿತ್ಸೆ ಒದಗಿಸಿದರೆ ಭವಿಷ್ಯದಲ್ಲಿ ಪರಿತಪಿಸುವುದು ತಪ್ಪಲಿದೆ. ಯುವಸಮುದಾಯವೂ ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಎದುರಿಸುತ್ತಿರುವುದು ಎಚ್ಚರಿಕೆ ಗಂಟೆಯಾಗಿದೆ. ಆರೋಗ್ಯಯುತ ಜೀವನಕ್ಕೆ ಯುವಜನರು ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.
ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್, ‘ಹೃದಯ ಸಂಬಂಧಿ ಮರಣ ಪ್ರಕರಣಗಳಲ್ಲಿ ಶೇ 30ರಷ್ಟು ಸಾವುಗಳು ಅಧಿಕ ರಕ್ತದೊತ್ತಡದಿಂದಲೇ ಸಂಭವಿಸುತ್ತಿವೆ. ನಗರ ಪ್ರದೇಶದಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಜಗತ್ತಿನ ವಿವಿಧ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿಯೇ ಅಧಿಕ ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದರು.
ಕ್ಯಾನ್ಸರ್ ತಜ್ಞ ಡಾ.ಯು.ಎಸ್. ವಿಶಾಲ್ ರಾವ್, ‘ತಂಬಾಕು ಉತ್ಪನ್ನಗಳ ಸೇವನೆಯ ನಿಯಂತ್ರಣದಲ್ಲಿ ಕರ್ನಾಟಕವು ಜಗತ್ತಿಗೆ ಮಾದರಿಯಾಗಿದೆ. ಶೇ 7ರಷ್ಟು ತಂಬಾಕು ಸೇವನೆ ನಿಯಂತ್ರಣ ಸಾಧನೆ ಮಾಡಿರುವುದು ವಿಶ್ವದಲ್ಲಿ ಕರ್ನಾಟಕ ಮಾತ್ರ. ಇದನ್ನು ಪರಿಗಣಿಸಿ ವಿಶ್ವಸಂಸ್ಥೆಯೇ ರಾಜ್ಯವನ್ನು ಪ್ರಶಂಸಿದೆ. ಇದೇ ರೀತಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೂ ಶ್ರಮಿಸಬೇಕು’ ಎಂದು ಹೇಳಿದರು.
ಗ್ಲೋಬಲ್ ಹೆಲ್ತ್ ಅಡ್ವೋಕೆಸಿ ಇನ್‌ಕ್ಯೂಬಿಟರ್‌ನ ಡಾ. ಓಂಪ್ರಕಾಶ್ ಬೇರ, ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ರಿಯಾಜ್ ಬಾಷಾ, ಎನ್‌ಎಸ್‌ಎಸ್ ಘಟಕದ ಮುಖ್ಯಸ್ಥ ವಸಂತ್ ಶೆಟ್ಟಿ, ಇನ್‌ಸ್ಟಿಟ್ಯೂಟ್ ಫಾರ್ ಪಾಲಿಸಿ ನಿರ್ದೇಶಕ ಅಮಿತ್ ಕರ್ಣಿಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.