ADVERTISEMENT

ಕಿಡ್ನಿ ಸಮಸ್ಯೆಗೆ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಅಗತ್ಯ: ಸುದರ್ಶನ್ ಬಲ್ಲಾಳ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 21:10 IST
Last Updated 10 ಮಾರ್ಚ್ 2021, 21:10 IST
ವಿಶ್ವ ಮೂತ್ರಪಿಂಡ ದಿನದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆಗಳ ಸಮೂಹವು ‘ಪ್ರಜಾವಾಣಿ’ ಮತ್ತು ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಆಯೋಜಿಸಿದ ವಿಚಾರಸಂಕಿರಣದಲ್ಲಿ ಡಾ.ಆರ್. ಸಂಜಯ್ ರಾಂಪುರೆ (ಎಡಭಾಗ) ಮತ್ತು ರೋಗಿ ವೆಂಕಟೇಶ್ ಜೋಶಿ (ಬಲಭಾಗ) ಸಂವಾದ ನಡೆಸಿದರು. ಡಾ. ನಾಗಸುಬ್ರಮಣ್ಯಮ್ ಎಸ್. ಇದ್ದರು – -ಪ್ರಜಾವಾಣಿ ಚಿತ್ರ
ವಿಶ್ವ ಮೂತ್ರಪಿಂಡ ದಿನದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆಗಳ ಸಮೂಹವು ‘ಪ್ರಜಾವಾಣಿ’ ಮತ್ತು ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಆಯೋಜಿಸಿದ ವಿಚಾರಸಂಕಿರಣದಲ್ಲಿ ಡಾ.ಆರ್. ಸಂಜಯ್ ರಾಂಪುರೆ (ಎಡಭಾಗ) ಮತ್ತು ರೋಗಿ ವೆಂಕಟೇಶ್ ಜೋಶಿ (ಬಲಭಾಗ) ಸಂವಾದ ನಡೆಸಿದರು. ಡಾ. ನಾಗಸುಬ್ರಮಣ್ಯಮ್ ಎಸ್. ಇದ್ದರು – -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮೂತ್ರಪಿಂಡದ (ಕಿಡ್ನಿ) ಸಮಸ್ಯೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಬೇಕಿದೆ. ಇಲ್ಲವಾದಲ್ಲಿ ಮೂತ್ರಪಿಂಡಗಳ ಕಾರ್ಯನಿರ್ವಹಣೆ ಕನಿಷ್ಠ ಮಟ್ಟಕ್ಕಿಳಿದು, ದೇಹದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಹೊರಹಾಕಲು ಅಸಮರ್ಥವಾಗುತ್ತವೆ’ ಎಂದು ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.

ವಿಶ್ವ ಮೂತ್ರಪಿಂಡ ದಿನದ ಪ‍್ರಯುಕ್ತ ಮಣಿಪಾಲ್ ಆಸ್ಪತ್ರೆಗಳ ಸಮೂಹವುನಗರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಬುಧವಾರ ಆಯೋಜಿಸಿದ ಮೂತ್ರಪಿಂಡ ಆರೊಗ್ಯ ಜಾಗೃತಿ ವಿಚಾರಸಂಕಿರಣದಲ್ಲಿ ಮಾತನಾಡಿದರು.

‘ಮೂತ್ರಪಿಂಡದ ಮಹತ್ವದ ಬಗ್ಗೆ ಜನರಿಗೆ ಅಷ್ಟಾಗಿ ಜಾಗೃತಿಯಿಲ್ಲ. ಇದರಿಂದಾಗಿ ಅದರ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸದೇ ಸಮಸ್ಯೆಯನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ. ನಮ್ಮ ದೇಹದಲ್ಲಿ ಮಿದುಳು ಮತ್ತು ಹೃದಯದಂತೆ ಮೂತ್ರಪಿಂಡ ಕೂಡ ಸೂಕ್ಷ್ಮವಾದ ಅಂಗ. ರಕ್ತ ಶುದ್ಧಿ ಕಾರ್ಯದ ನಂತರ ಮೂತ್ರದ ಮೂಲಕ ದೇಹದಲ್ಲಿನ ತ್ಯಾಜ್ಯವನ್ನು ಹೊರಹಾಕಲು ಈ ಅಂಗ ಸಹಕಾರಿ. ಅದೇ ರೀತಿ, ದೇಹದಲ್ಲಿನ ಲವಣಾಂಶಗಳು, ನೀರಿನಾಂಶಗಳು, ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಸಮತೋಲನದಲ್ಲಿ ಇರಿಸುತ್ತದೆ. ಹಾಗಾಗಿ, ಮೂತ್ರಪಿಂಡದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಸಮಸ್ಯೆಯನ್ನು ಪತ್ತೆ ಹಚ್ಚುವಲ್ಲಿ ತಡವಾದಲ್ಲಿ ಡಯಾಲಿಸಿಸ್, ಅಂಗಾಂಗ ಕಸಿ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

ವೈದ್ಯ ಡಾ. ದೀಪಕ್ ದುಬೆ ಮಾತನಾಡಿ, ‘ದೀರ್ಘಕಾಲದ ಸಂಕೀರ್ಣ ಮೂತ್ರಪಿಂಡ ಸಮಸ್ಯೆಯಿದ್ದಲ್ಲಿ ಅಂತಹವರಿಗೆ ಅಂಗಾಂಗ ಕಸಿ ನೆರವಾಗಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಆವಿಷ್ಕಾರಗಳಿಂದ ಕಸಿ ಪ್ರಕ್ರಿಯೆ ಸುಲಭವಾಗಿದೆ. ಈ ಕಸಿಗೆ ಒಳಪಟ್ಟ ಬಳಿಕ ವ್ಯಕ್ತಿಯ ಜೀವನಮಟ್ಟವು ಸುಧಾರಿಸುವ ಜತೆಗೆ ಈ ಮೊದಲಿನಂತೆ ಆರೋಗ್ಯಕರ ಜೀವನ ಸಾಧ್ಯವಾಗುತ್ತದೆ. ಈ ಕಸಿಗೆ ಹಲವಾರು ಮಂದಿ ಎದುರು ನೋಡುತ್ತಿದ್ದಾರೆ. ಮೂತ್ರಪಿಂಡದ ದಾನದ ಬಗ್ಗೆ ಕೂಡ ಹೆಚ್ಚಿನ ಅರಿವು ಮೂಡಬೇಕಿದೆ’ ಎಂದು ತಿಳಿಸಿದರು.

ಡಾ. ಶಂಕರನ್ ಸುಂದರ್, ‘ಮೂತ್ರಪಿಂಡದ ಬಗ್ಗೆ ಬಹುತೇಕರಿಗೆ ಸೂಕ್ತ ಮಾಹಿತಿಯಲ್ಲ. ಇದರ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಬೇಕಿದೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈ ಅಂಗದ ಬಗ್ಗೆ ತಿಳಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಪಠ್ಯದಲ್ಲಿ ಮೂತ್ರಪಿಂಡದ ಕಾರ್ಯವೈಖರಿ, ಸಮಸ್ಯೆಗಳು ಮತ್ತು ಚಿಕಿತ್ಸೆಗಳ ಬಗ್ಗೆ ಸೇರಿಸಬೇಕು. ಮೂತ್ರಪಿಂಡ ದಾನಕ್ಕೆ ಕೂಡ ಹೆಸರು ನೋಂದಾಯಿಸಿ, ಇನ್ನೊಂದು ಜೀವಕ್ಕೆ ನೆರವಾಗಬೇಕು’ ಎಂದರು.

ಇದೇ ವೇಳೆ ಮೂತ್ರಪಿಂಡ ಕಾಯಿಲೆಯನ್ನು ಜಯಿಸಿದವರು ಹಾಗೂ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ತಮ್ಮ ಅನುಭವ ಹಂಚಿಕೊಂಡರು. ದಿ.ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸೀತಾರಾಮನ್ ಶಂಕರ್ ಇದ್ದರು.

‘ಸಮತೋಲನ ಅವಶ್ಯ’
‘ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿದಂತೆ ಜೀವನಶೈಲಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಮೂತ್ರಪಿಂಡದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಕಾಲ ಕಾಲಕ್ಕೆ ತಪಾಸಣೆಯನ್ನು ಮಾಡಿಸಿಕೊಳ್ಳುತ್ತಿರಬೇಕು. ಪೌಷ್ಟಿಕ ಆಹಾರ ಸೇವನೆ, ಉತ್ತಮ ಜೀವನಶೈಲಿ, ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕು. ಈಗಾಗಲೇ ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರು ನಿಯಮಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಜತೆಗೆ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಡಾ. ಸಂಜಯ್ ರಾಂಪುರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.