ADVERTISEMENT

11ರಿಂದ ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ

ಮಂಗಳೂರಿನ ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಆಯೋಜನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 12:55 IST
Last Updated 9 ಜನವರಿ 2020, 12:55 IST

ಬೆಂಗಳೂರು: ಸ್ಥಾನಿಕ ಬ್ರಾಹ್ಮಣ ಮಹಾಮಂಡಲವು ಶನಿವಾರ (ಜ.11) ಹಾಗೂ ಭಾನುವಾರ (ಜ.12) ಕೋಡಿಗೆಹಳ್ಳಿಯ ಜ್ಞಾನಶಕ್ತಿ ಮಂಟಪದಲ್ಲಿ ನಾಲ್ಕನೇ ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶವನ್ನು ಹಮ್ಮಿಕೊಂಡಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷ ಎನ್‌.ಕೆ.ಜಗನ್ನಿವಾಸ್ ರಾವ್‌ ಮಾತನಾಡಿ, ‘ಸಮಾವೇಶವನ್ನು ಹೆಬ್ಬೂರಿನ ಕೋದಂಡಾಶ್ರಮ ಮಠದ ಪೀಠಾಧಿಪತಿ ಮಾಧವಾಶ್ರಮ ಸ್ವಾಮೀಜಿ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಭಾದ ಅಧ್ಯಕ್ಷ ರವೀಂದ್ರನಾಥ ರಾವ್ ಬೆಳ್ಳೆ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ‘ರಾಷ್ಟ್ರೋತ್ಥಾನ ಮತ್ತು ಬ್ರಾಹ್ಮಣ್ಯ’ ಎಂಬ ವಿಷಯದ ಮೇಲೆ ಉಪನ್ಯಾಸಕ ಆದರ್ಶ ಗೋಖಲೆ ಮಾತನಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ದಿನೇಶ್ ಗುಂಡೂರಾವ್ ಮತ್ತಿತರರು ಉಪಸ್ಥಿತರಿರುವರು’ ಎಂದು ತಿಳಿಸಿದರು.

‘ಡಾ.ವೈ.ಸುದರ್ಶನ ರಾವ್ ರಚಿಸಿರುವ ‘ಅಸ್ಮಿತೆ’ ಕೃತಿಯನ್ನು ಎಸ್‌.ಎಸ್.ಜೋಶಿ ಬಿಡುಗಡೆ ಮಾಡಲಿದ್ದಾರೆ.ಎರಡು ದಿನಗಳು ನಡೆಯುವ ಸಮ್ಮೇಳನದಲ್ಲಿ ಯಕ್ಷನೃತ್ಯ ರೂಪಕ, ನೃತ್ಯ ವೈಭವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 6 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಾಜದ ಸಾಧಕರಿಗೆ ಸನ್ಮಾನ, ಯುವ ಪ್ರತಿಭೆಗಳಿಗೆ ಪುರಸ್ಕಾರ ಸೇರಿದಂತೆ ಹಲವು ವಿಶೇಷತೆಗಳು ಇರಲಿವೆ. ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ’ ಎಂದರು.

ADVERTISEMENT

‘ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಯುವಕ–ಯುವತಿಯರಿಗೆ ವಿವಾಹ ವೇದಿಕೆಯ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.