
ಬೆಂಗಳೂರು: ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ರಾಮಯ್ಯ ಮೆಮೊರಿಯಲ್ ಆಸ್ಪತ್ರೆ ವತಿಯಿಂದ ವಿಶ್ವ ಆಸ್ಟಿಯೊಪೊರೊಸಿಸ್ ದಿನ ಆಚರಿಸಲಾಯಿತು. ಆಸ್ಟಿಯೊಪೊರೊಸಿಸ್ ಕುರಿತು ಆಸ್ಪತ್ರೆ ವೈದ್ಯರು ಅರಿವು ಮೂಡಿಸಿದರು.
ವಿಶ್ವದಲ್ಲಿ ಲಕ್ಷಾಂತರ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 5 ಮಹಿಳೆಯರಲ್ಲಿ ಒಬ್ಬರು ಮತ್ತು 20 ಪುರುಷರಲ್ಲಿ ಒಬ್ಬರು ಆಸ್ಟಿಯೊಪೊರೊಸಿಸ್‌ನಿಂದ ಬಳಲುತ್ತಿದ್ದಾರೆ. ಹೊಸ ಹಾಗೂ ಆತ್ಯಾಧುನಿಕ ಡಿಎಕ್ಸ್‌ಎ ಸ್ಕ್ಯಾನರ್ ಮೂಲಕ ರೋಗವನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಡಾ.ಎಸ್.ಚಿತ್ರಾ ಮಾತನಾಡಿ, ‘ಅಸ್ಟಿಯೊಪೊರೊಸಿಸ್ ಅನ್ನು ತಡೆಗಟ್ಟಬಹುದು ಮತ್ತು ಚಿಕಿತ್ಸೆ ನೀಡಬಹುದು. ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಆರಂಭದಲ್ಲಿಯೇ ರೋಗದ ಲಕ್ಷಣಗಳನ್ನು ಪತ್ತೆ ಮಾಡದಿದ್ದರೆ ಚಿಕಿತ್ಸೆಗೆ ತೊಂದರೆ ಆಗುತ್ತದೆ. ರೋಗದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದರು.
ಆಸ್ಟಿಯೊಪೊರೊಸಿಸ್ ಅಂದರೆ ಮೂಳೆ ತೆಳುವಾಗಿ ಮತ್ತು ದುರ್ಬಲವಾಗಿ ಮೂಳೆ ಮುರಿತಕ್ಕೆ ಕಾರಣವಾಗುವ ಸ್ಥಿತಿ. ದೇಹವು ಹೊಸ ಮೂಳೆಗಳ ರಚನೆ ರೂಪಿಸಲು ವಿಫಲವಾದರೆ ಅಥವಾ ಹಳೆಯ ಮೂಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಶವಾದರೆ ಈ ರೋಗವು ಸಂಭವಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.