ADVERTISEMENT

ಮುಂಬೈನ ₹ 40 ಲಕ್ಷ ಮೌಲ್ಯದ ಡ್ರಗ್ಸ್ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 22:11 IST
Last Updated 5 ಮಾರ್ಚ್ 2021, 22:11 IST
ಜಪ್ತಿ ಮಾಡಲಾದ ಎಂಡಿಎಂಎ ಡ್ರಗ್ಸ್
ಜಪ್ತಿ ಮಾಡಲಾದ ಎಂಡಿಎಂಎ ಡ್ರಗ್ಸ್   

ಬೆಂಗಳೂರು: ಮುಂಬೈನಿಂದ ಡ್ರಗ್ಸ್ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾದ ಯುಗೊಚುಕ್ವೊ ವಿಕ್ಟರ್‌ನನ್ನು (34) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿ, ಹೆಣ್ಣೂರು ಬಳಿ ವಾಸವಿದ್ದ. ಆತನಿಂದ ₹ 40 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ಸ್ ಹಾಗೂ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಡ್ರಗ್ಸ್ ಮಾರಾಟ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿ, ಮುಂಬೈನಲ್ಲಿರುವ ಡ್ರಗ್ಸ್ ಪೆಡ್ಲರ್ ಮೈಕಲ್ ಜೊತೆ ಒಡನಾಟವಿಟ್ಟುಕೊಂಡಿದ್ದ. ಆತನ ಮೂಲಕ ಮುಂಬೈನಿಂದ ನಗರಕ್ಕೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಕೆಲ ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿಗಳ ಉದ್ಯೋಗಿಗಳು, ಕೆಲ ಉದ್ಯಮಿಗಳಿಗೆ ಡ್ರಗ್ಸ್ ಮಾರುತ್ತಿದ್ದ’ ಎಂದೂ ತಿಳಿಸಿದರು.

ADVERTISEMENT

‘ಹೆಣ್ಣೂರಿನ ವಡ್ಡರಪಾಳ್ಯದ ಕಾವೇರಿನಗರದ ಮನೆಯಲ್ಲಿ ಆರೋಪಿ ಬಾಡಿಗೆಗೆ ಇದ್ದ. ಮನೆ ಹಾಗೂ ಇತರೆಡೆ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆತನನ್ನು ಬಂಧಿಸಲಾಯಿತು’ ಎಂದೂ ಪೊಲೀಸರು ಹೇಳಿದರು.

‘2018ರಿಂದಲೇ ಆರೋಪಿ ಕೃತ್ಯ ಎಸಗುತ್ತಿದ್ದ. ಡ್ರಗ್ಸ್ ಮಾರಾಟದಿಂದ ಬಂದ ಹಣದಲ್ಲಿ ಆತ ಐಷಾರಾಮಿ ಜೀವನ ನಡೆಸುತ್ತಿದ್ದ. ಆತನ ವಿರುದ್ಧ ಕೋರಮಂಗಲ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.