ADVERTISEMENT

ಯಡಿಯೂರು ವಾರ್ಡ್‌: ಅಕ್ರಮ ಕಟ್ಟಡಗಳ ತೆರವಿಗೆ ಮೀನಮೇಷ

ಯಡಿಯೂರು ವಾರ್ಡ್‌ನಲ್ಲಿ ನಕ್ಷೆ ಉಲ್ಲಂಘನೆ, ನಕ್ಷೆ ಮಂಜೂರಾತಿ ಪಡೆಯದ ಕಟ್ಟಡಗಳು

ವಿಜಯಕುಮಾರ್ ಎಸ್.ಕೆ.
Published 3 ಅಕ್ಟೋಬರ್ 2022, 21:28 IST
Last Updated 3 ಅಕ್ಟೋಬರ್ 2022, 21:28 IST
01.10.2022 Yadiyuru ward-Special-Story
01.10.2022 Yadiyuru ward-Special-Story   

ಬೆಂಗಳೂರು: ಪಾಲಿಕೆಯ ಯಡಿಯೂರು ವಾರ್ಡ್‌ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಆಗಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಮೀನಮೇಷ ಎಣಿಸುತ್ತಿದೆ. ಲೋಕಾಯುಕ್ತರು ವಿವರ ಕೇಳಿದ ಬಳಿಕ ಅಂದಾಜು ವೆಚ್ಚ ಸಿದ್ಧಪಡಿಸಿರುವ ಅಧಿಕಾರಿಗಳು, ಟೆಂಡರ್ ಕರೆಯಲು ಮೂರು ತಿಂಗಳಿಂದ ದಿನ ದೂಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಜಯನಗರ ಆರನೇ ಬ್ಲಾಕ್‌ನ 23ನೇ ಅಡ್ಡ ರಸ್ತೆ, 27ನೇ ಅಡ್ಡರಸ್ತೆ, ಶಾಸ್ತ್ರಿನಗರ 4ನೇ ಮುಖ್ಯರಸ್ತೆ, ಎಸ್‌.ಕರಿಯಪ್ಪ ರಸ್ತೆ, ಟಾಟಾ ಸಿಲ್ಕ್ ಫಾರ್ಮ್‌ನ 5ನೇ ‘ಬಿ‘ ಮುಖ್ಯ ರಸ್ತೆಯಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ’ ಎಂದು ವಿ.ಶಶಿಕುಮಾರ್ ಎಂಬುವರು ಪಾಲಿಕೆ ಅಧಿಕಾರಿಗಳಿಗೆ ಕಳೆದ
ಎರಡು ವರ್ಷಗಳಿಂದ ದೂರು ನೀಡುತ್ತಲೇ ಇದ್ದಾರೆ.

ಈ ಐದು ಕಟ್ಟಡಗಳ ಪೈಕಿ ಎರಡು ಕಟ್ಟಡಗಳಲ್ಲಿ ಮಂಜೂರಾತಿ ಪಡೆದಿರುವ ನಕ್ಷೆ ಉಲ್ಲಂಘನೆ ಆಗಿದ್ದರೆ, ಉಳಿದ ಮೂರು ಕಟ್ಟಡಗಳಿಗೆ ನಕ್ಷೆ ಮಂಜೂರಾತಿಯನ್ನೇ ಪಡೆದಿಲ್ಲ. ‘ಸಹಾಯಕ ಎಂಜಿನಿಯರ್ ಆಗಿದ್ದ ಯತೀಶ್ ಅವರು ಈಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿದ್ದು, ಇವರ ವ್ಯಾಪ್ತಿಯಲ್ಲೇ ಈ ಅಕ್ರಮ ಕಟ್ಟಡಗಳು ನಿರ್ಮಾಣವಾಗಿವೆ. ಆದರೂ ಕ್ರಮ ಕೈಗೊಳ್ಳದೆ ಅವರು ಮೌನ ವಹಿಸಿದ್ದಾರೆ’ ಎಂದು ಶಶಿಕುಮಾರ್ ಪಾಲಿಕೆಯ ಮುಖ್ಯ ಆಯುಕ್ತರಿಗೂ ದೂರು ಸಲ್ಲಿಸಿದ್ದರು. ಆದರೂ, ಕ್ರಮ ಕೈಗೊಳ್ಳದಿದ್ದರಿಂದ ಅವರು ಲೋಕಾಯುಕ್ತದಲ್ಲೂ ದೂರು ದಾಖಲಿಸಿದ್ದಾರೆ.

ADVERTISEMENT

‘ಲೋಕಾಯುಕ್ತದಿಂದ ವಿವರಣೆ ಕೇಳಿದ ಬಳಿಕ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು, ಅಕ್ರಮ ಕಟ್ಟಡಗಳ ತೆರವಿಗೆ ಬಿಬಿಎಂಪಿ ಕಾಯ್ದೆ 356ರ ಅಡಿಯಲ್ಲಿ ಕ್ರಮಕ್ಕೆ ಮುಂದಾಗಿದ್ದರು. ಈ ಕಟ್ಟಡಗಳ ತೆರವಿಗೆ ಆಗಲಿರುವ ವೆಚ್ಚ ಎಷ್ಟು ಎಂದು ಅಂದಾಜು ಸಿದ್ಧಪಡಿಸಿದ್ದಾರೆ. ಆದರೆ, ಟೆಂಡರ್ ಕರೆದು ಕಟ್ಟಡಗಳ ತೆರವು ಮಾಡಬೇಕಿದೆ. ಈ ಕೆಲಸಕ್ಕೆ ಈಗ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಈ ರೀತಿ ವಿಳಂಬ ಆಗುತ್ತಿರುವುದು ಅಕ್ರಮ ಕಟ್ಟಡಗಳ ಮಾಲೀಕರಿಗೆ ಅನುಕೂಲ ಮಾಡಿಕೊಟ್ಟಿದೆ. ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತರುತ್ತಿದ್ದಾರೆ. ಐದು ಕಟ್ಟಡಗಳಲ್ಲಿ ಈಗಾಗಲೇ ಮೂರು ಕಟ್ಟಡಗಳ ಮಾಲೀಕರು ತಡೆಯಾಜ್ಞೆ ತಂದಿದ್ದಾರೆ’ ಎಂದು ಶಶಿಕುಮಾರ್ ಹೇಳಿದರು.

‘ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಗದಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳೇ ವಿಳಂಬ ಮಾಡುವ ಮೂಲಕ ಪರೋಕ್ಷವಾಗಿ ಅಕ್ರಮ ಕಟ್ಟಡಗಳ ಮಾಲೀಕರಿಗೆ ನೆರವಾಗುತ್ತಿದ್ದಾರೆ’ ಎಂದು ಅವರು ದೂರುತ್ತಾರೆ.

ಇದೇ ರೀತಿ ವಿಳಂಬ ಮಾಡಿದರೆ ಉಳಿದ ಎರಡು ಕಟ್ಟಡಗಳಿಗೂ ತಡೆಯಾಜ್ಞೆ ಸಿಗಲಿದೆ. ತಡೆಯಾಜ್ಞೆ ತೆರವುಗೊಳಿಸಲು ಬಿಬಿಎಂಪಿ ಕಾನೂನು ಕೋಶ ಮುಂದಾಗಬೇಕು. ಆ ಕೆಲಸವೂ ಆಗುತ್ತಿಲ್ಲ. ತಡೆಯಾಜ್ಞೆ ತೆರವಿಗೆ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಮಾಹಿತಿಯೇ ಇಲ್ಲ ಎಂಬ ಉತ್ತರವನ್ನು ಕಾನೂನು ಕೋಶ ನೀಡುತ್ತಿದೆ’ ಎಂದು ಬೇಸರ
ವ್ಯಕ್ತಪಡಿಸಿದರು.

‘ಅಕ್ರಮ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಕಾಯ್ದೆ 356ರ ಅಡಿಯಲ್ಲಿ ಅನುಮತಿ ದೊರೆತಿದೆ. ಅಂದಾಜು ಸಿದ್ಧವಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಸಬೇಕಿದೆ. ಆದಷ್ಟು ಬೇಗ ಈ ಕೆಲಸ ಮಾಡಲಾಗುವುದು’ ಎಂದು ಬಿಬಿಎಂಪಿ ದಕ್ಷಿಣ ವಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ‘ಗೆ ಸ್ಪಷ್ಟಪಡಿಸಿದರು.

ಪ್ರಭಾವಿ ಮುಖಂಡನಿಂದ ಬೆದರಿಕೆ

‘ಅಕ್ರಮ ಕಟ್ಟಡಗಳ ವಿರುದ್ಧ ದೂರು ನೀಡಿರುವ ನನಗೆ ಯಡಿಯೂರು ವಾರ್ಡ್‌ನ ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಶಶಿಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

‘ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಸಂಗ್ರಹಿಸಿ ಅಕ್ರಮಗಳನ್ನು ಬಯಲಿಗೆಳೆಯುವ ವ್ಯಕ್ತಿಯಂತೆ ಮುಖವಾಡ ಧರಿಸಿರುವ ಅವರು, ಇಲ್ಲಿ ಅಕ್ರಮ ಕಟ್ಟಡಗಳ ಮಾಲೀಕರ ಪರವಾಗಿ ನಿಂತಿದ್ದಾರೆ. ಸರ್ಕಾರಿ ಕಚೇರಿಯಲ್ಲೇ ನನಗೆ ಜೀವ ಬೆದರಿಕೆ ಹಾಕಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಎಫ್‌ಐಆರ್ ದಾಖಲಿಸುತ್ತಿಲ್ಲ’ ಎಂದು ಶಶಿಕುಮಾರ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.