ಅಮಾನತು
ಬೆಂಗಳೂರು: ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಅವರನ್ನು ಅಮಾನತುಗೊಳಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶಿಸಿದ್ದಾರೆ.
ಮುನಿಶಾಮಿ ರೆಡ್ಡಿ ಅವರು ಸರ್ಕಾರಿ ಸೇವೆಗೆ ಅನಧಿಕೃತ ಗೈರಾಗುವ ಮೂಲಕ ತೋರಿರುವ ಬೇಜವಾಬ್ದಾರಿ, ನಿರ್ಲಕ್ಷ್ಯ ಹಾಗೂ ಅವರ ಮೇಲೆ ಲೋಕಾಯುಕ್ತ ಪ್ರಕರಣವಿರುವುದನ್ನು ಪರಿಗಣಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪಹಣಿಯಲ್ಲಿ ಜಮೀನಿನ ಮಾಲೀಕರ ಹೆಸರನ್ನು ಸೇರಿಸಲು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ₹3 ಲಕ್ಷ ಹಣ ಪಡೆದು, ನಂತರ ₹2 ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿರುವ ಬಗ್ಗೆ ವಕೀಲರಾದ ಮಹೇಶ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಫೆ.3ರಂದು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಕಾರ್ಯಾಚರಣೆ ಮತ್ತು ಅಧಿಕಾರಿಯ ಬಂಧನದ ಕುರಿತು ಅಧಿಕೃತ ಮಾಹಿತಿ ತನಿಖಾ ಸಂಸ್ಥೆಯಿಂದ ಸ್ವೀಕೃತವಾಗಿರುವುದಿಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಎಂದು ಪ್ರಾದೇಶಿಕ ಆಯುಕ್ತರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ತಹಶೀಲ್ದಾರ್ ಅವರು ತಾಲ್ಲೂಕಿನ ವಿವಿಧ ಅರೆ ನ್ಯಾಯಿಕ ಪ್ರಕರಣಗಳ ಪೀಠಾಧಿಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದ್ದು, ಜವಾಬ್ದಾರಿಯುತವಾದ ಹುದ್ದೆಯಾಗಿರುತ್ತದೆ. ಆದರೆ, ಮುನಿಶಾಮಿ ಅವರು ಮೇಲಧಿಕಾರಿಗಳ ಪೂರ್ವಾನುಮತಿ, ರಜೆ ಮಂಜೂರಾತಿ ಪಡೆಯದೆ ಫೆ.4ರಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದಾರೆ. ಮುನಿಶಾಮಿರೆಡ್ಡಿ ಅವರ ವಿರುದ್ಧದ ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.