ಯಾಮಿನಿ ಪ್ರಿಯಾ, ವಿಘ್ನೇಶ್
ಬೆಂಗಳೂರು: ‘ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಅವರ ಮುಖಕ್ಕೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿ ವಿಘ್ನೇಶ್ (28) ಹಾಗೂ ಆತನಿಗೆ ನೆರವು ನೀಡಿದ್ದ ಹರೀಶ್‌ಗೆ(36) ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ, ಯಾಮಿನಿ ಪ್ರಿಯಾ ಅವರ ಸಂಬಂಧಿಕರು, ಕುಟುಂಬಸ್ಥರು ಹಾಗೂ ಸ್ಥಳೀಯರು ಶ್ರೀರಾಂಪುರ ಪೊಲೀಸ್ ಠಾಣೆಯ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
‘ಕಾನೂನು ಪ್ರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇಲ್ಲವೇ ತಮಗೆ ಒಪ್ಪಿಸಿ. ನಾವೇ ಆರೋಪಿಗಳಿಗೆ ಶಿಕ್ಷೆ ನೀಡುತ್ತೇವೆ’ ಎಂದು ಪ್ರತಿಭಟನಕಾರರು ಹೇಳಿದರು.
‘ನಗರದ ಅತ್ಯಂತ ಜನದಟ್ಟಣೆಯ ಪ್ರದೇಶದಲ್ಲೇ ಆರೋಪಿ ಚಾಕು ಹಿಡಿದು ಬಂದು ಕೊಲೆ ಮಾಡಿ ಪರಾರಿಯಾಗಿದ್ದ. ಪೊಲೀಸರೆಂದರೆ ಭಯವೇ ಇಲ್ಲವಾಗಿದೆ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ಪೊಲೀಸರ ನಿರ್ಲಕ್ಷ್ಯದಿಂದಲೇ ಕೊಲೆ?: ‘ಯಾಮಿನಿ ಪ್ರಿಯಾ ಅವರನ್ನು ಆರೋಪಿ ಪದೇ ಪದೇ ಅಡ್ಡಗಟ್ಟಿ ಪ್ರೀತಿಸುವಂತೆ ಪೀಡಿಸುತ್ತಿದ್ದ. ಹಿಂದೆ ಬಲವಂತದಿಂದ ತಾಳಿ ಕಟ್ಟಿದ್ದ. ಘಟನೆಯ ಬಳಿಕ, ಆರೋಪಿ ವಿಘ್ನೇಶ್ ವಿರುದ್ಧ ಯಾಮಿನಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಆರೋಪಿಯನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆಯನ್ನಷ್ಟೇ ನೀಡಿ ಕಳುಹಿಸಿದ್ದರು. ದೂರು ನೀಡಿದ ದಿನವೇ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕಿತ್ತು. ಪೊಲೀಸರು ನಿರ್ಲಕ್ಷ್ಯ ವಹಿಸಿದ ಕಾರಣದಿಂದಲೇ ಕೊಲೆ ನಡೆದಿದೆ’ ಎಂದು ಸ್ಥಳೀಯರು ದೂರಿದರು. ಪ್ರಿಯಾ ಅವರ ಪೋಷಕರು ಮಗಳನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು.
ಶ್ರೀರಾಂಪುರ ಬಳಿಯ ಸ್ವತಂತ್ರಪಾಳ್ಯದ ವಿಘ್ನೇಶ್, ತನಗೆ ಪರಿಚಯವಿದ್ದ ಯಾಮಿನಿ ಪ್ರಿಯಾ ಅವರನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ವಿದ್ಯಾರ್ಥಿನಿ ನಿರಾಕರಿಸಿದ್ದರು. ಗುರುವಾರ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಅಡ್ಡಗಟ್ಟಿ ಕೊಲೆ ಮಾಡಿ ಪರಾರಿಯಾಗಿದ್ದ. ಸೋಲದೇವನಹಳ್ಳಿ ಬಳಿ ಆರೋಪಿಗಳನ್ನು ಶ್ರೀರಾಂಪುರ ಠಾಣೆಯ ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.