ADVERTISEMENT

ಗುಂಡಿ ಬಿದ್ದ ರಸ್ತೆ: ಮೈಮರೆತರೆ ಜೀವಕ್ಕೇ ಸಂಚಕಾರ

ಉಲ್ಲಾಳದಿಂದ ಕೆಂಗೇರಿಗೆ ಸಂಪರ್ಕ ಬೆಸೆಯುವ 100 ಅಡಿ ರಸ್ತೆಯ ದುಸ್ಥಿತಿ

ಜಿ.ಶಿವಕುಮಾರ
Published 17 ಮೇ 2022, 19:45 IST
Last Updated 17 ಮೇ 2022, 19:45 IST
ಉಲ್ಲಾಳದ ಸಾಯಿ ಬಾಬಾ ಮಂದಿರದ ಬಳಿಯ ರಸ್ತೆ ಹಳ್ಳದಂತಾಗಿರುವುದು -ಪ್ರಜಾವಾಣಿ ಚಿತ್ರ/ ರಂಜು ಪಿ
ಉಲ್ಲಾಳದ ಸಾಯಿ ಬಾಬಾ ಮಂದಿರದ ಬಳಿಯ ರಸ್ತೆ ಹಳ್ಳದಂತಾಗಿರುವುದು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಗುಂಡಿಗಳು. ಅವುಗಳಲ್ಲಿ ಸಂಗ್ರಹವಾಗಿರುವ ಕೆಮ್ಮಣ್ಣಿನ ನೀರು. ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿರುವ ಜಲ್ಲಿಕಲ್ಲು. ರಸ್ತೆ ಮಧ್ಯೆಯೇ ಹರಡಿಕೊಂಡಿರುವ ಕೆಸರಿನ ರಾಡಿ...

ಉಲ್ಲಾಳದಿಂದ ಕೆಂಗೇರಿಗೆ ಸಂಪರ್ಕ ಬೆಸೆಯುವ100 ಅಡಿ ರಸ್ತೆಯ ದುಸ್ಥಿತಿ ಇದು.

ಕೆಂಗೇರಿ, ಕೆಂಗೇರಿ ಉಪನಗರ, ಮಂಗನಹಳ್ಳಿ, ಉಲ್ಲಾಳ, ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆ, ಉಪಕಾರ್‌ ಬಡಾವಣೆ, ಉಲ್ಲಾಳ ಬಸ್ತಿ, ದೊಡ್ಡ ಬಸ್ತಿ, ಮಾರುತಿನಗರ, ಮಾಗಡಿ ರಸ್ತೆ, ಬ್ಯಾಡರಹಳ್ಳಿ ಸೇರಿದಂತೆ ಇತರೆಡೆ ಹೋಗುವವರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಬಿಡುವಿಲ್ಲದೆ ಓಡಾಡುತ್ತವೆ. ಶಾಲೆ, ಕಾಲೇಜುಗಳಿಗೆ ಹೋಗುವವರೂ ಇದೇ ಹಾದಿಯಲ್ಲಿ ಸಾಗಬೇಕು.

ADVERTISEMENT

ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಈ ಮಾರ್ಗದಲ್ಲಿ ಸಂಚಾರ ಮಾಡುವವರು ಮೈಯೆಲ್ಲಾ ಕಣ್ಣಾಗಿಸಿಕೊಂಡೇ ವಾಹನ ಚಲಾಯಿಸಬೇಕು! ಎಚ್ಚರ ತಪ್ಪಿದರೆ ಅಪಾಯ ಎದುರಾಗುವುದು ನಿಶ್ಚಿತ.

‘ಸುಮಾರು 4 ಕಿ.ಮೀ.ವರೆಗೂ ರಸ್ತೆ ಹಾಳಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ. ಅಲ್ಲಲ್ಲಿ ಕಟ್ಟಡ ಹಾಗೂ ಇತರ ತ್ಯಾಜ್ಯವನ್ನು ಸುರಿಯಲಾಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ದ್ವಿಚಕ್ರ ವಾಹನ ಸವಾರರು ಲೆಕ್ಕವಿಲ್ಲದಷ್ಟು ಬಾರಿ ಬಿದ್ದು ಗಾಯಗೊಂಡಿದ್ದಾರೆ. ಹೀಗಿದ್ದರೂ ರಸ್ತೆ ದುರಸ್ತಿಗೊಳಿಸುವ ಕೆಲಸ ಆಗಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ವಾರದಿಂದ ಬಿಡದೆ ಮಳೆ ಸುರಿದ ಕಾರಣ ಗುಂಡಿಗಳಿಗೆ ತುಂಬಿದ್ದ ಮಣ್ಣೆಲ್ಲಾ ಕೊಚ್ಚಿಕೊಂಡು ಬಂದು ರಸ್ತೆಯ ಮಧ್ಯದಲ್ಲೇ ಹರಡಿಕೊಂಡಿವೆ. ಗುಂಡಿಗಳು ಈಗ ಹೊಂಡದಂತಾಗಿವೆ. ಇದರಿಂದ ವಾಹನ ಸವಾರರು ಸಂಕಟ ಅನುಭವಿಸುವಂತಾಗಿದೆ’ ಎಂದು ವಿಶ್ವೇಶ್ವರಯ್ಯ ಬಡಾವಣೆಯ ಶ್ರೀನಿವಾಸ್‌ ದೂರಿದರು.

‘ತಿಂಗಳ ಹಿಂದೆ ಅಪಘಾತವೊಂದರಲ್ಲಿ ಬೈಕ್‌ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರು. ಗುಂಡಿಗಳಿಂದಾಗಿ ಈ ರಸ್ತೆಯಲ್ಲಿ ಅಪಘಾತಗಳಾಗುವುದು ಸಾಮಾನ್ಯವಾಗಿಬಿಟ್ಟಿದೆ. ಸಮಸ್ಯೆಯ ತೀವ್ರತೆಯ ಅರಿವಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ನಾಗರಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮಕ್ಕಳನ್ನು ಶಾಲೆ–ಕಾಲೇಜುಗಳಿಗೆ ಕರೆದುಕೊಂಡು ಹೋಗಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ’ ಎಂದು ಉಲ್ಲಾಳ ಬಸ್ತಿಯ ನವಾಜ್‌ ಕಿಡಿಕಾರಿದರು.

‘ಒಳಚರಂಡಿ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಹೀಗಾಗಿ ಮಳೆ ನೀರೆಲ್ಲಾ ರಸ್ತೆಯಲ್ಲೇ ನಿಂತುಕೊಳ್ಳುತ್ತದೆ. ಹೊಳೆಯಂತಾಗುವ ಈ ರಸ್ತೆಯಲ್ಲಿ ಅನೇಕರು ಬೈಕ್‌ ಚಲಾಯಿಸಿಕೊಂಡು ಹೋಗುತ್ತಾರೆ. ಗುಂಡಿ ಕಾಣದೆ ರಸ್ತೆಯಲ್ಲೇ ಉರುಳಿಬಿದ್ದ ನಿದರ್ಶನಗಳೂ ಇದೆ. ಬೇಸಿಗೆಯಲ್ಲಿ ಸುರಿದ ಮಳೆಗೆ ಹೀಗಾದರೆ, ಮಳೆಗಾಲದಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ’ ಎಂದು ಉಲ್ಲಾಳದ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಜೀವ ಉಳಿದಿದ್ದೇ ಹೆಚ್ಚು’

‘ಸೋಮವಾರ ಸುರಿದ ಮಳೆಯಿಂದಾಗಿ ರಸ್ತೆಯೆಲ್ಲಾ ಜಲಾವೃತವಾಗಿತ್ತು. ಅದರಲ್ಲೇ ಬೈಕ್‌ ಚಲಾಯಿಸಿಕೊಂಡು ಹೋದೆ. ರಸ್ತೆ ಗುಂಡಿ ಕಾಣದೆ ಅದರೊಳಗೆ ಬೈಕ್‌ ಇಳಿಸಿದ್ದರಿಂದ ಆಯತಪ್ಪಿ ಬಿದ್ದೆ. ಹಿಂಬದಿಯಿಂದಲೇ ಕ್ಯಾಂಟರ್‌ವೊಂದು ಬರುತ್ತಿತ್ತು. ಆತ ಹಠಾತ್ತನೇ ಬ್ರೇಕ್‌ ಹಾಕಿದ್ದರಿಂದ ನನ್ನ ಜೀವ ಉಳಿಯಿತು’ ಎಂದು ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುವ ಸಿಕಂದರ್‌ ಹೇಳಿದರು.

‘ಈ ರಸ್ತೆಯಲ್ಲಿ ಉಸಿರು ಬಿಗಿ ಹಿಡಿದುಕೊಂಡೇ ಬೈಕ್‌ ಚಲಾಯಿಸಬೇಕು. ಅಧಿಕಾರಿಗಳು ಇತ್ತ ಸುಳಿಯುವುದೇ ಇಲ್ಲ. ಹೀಗಿರುವಾಗ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ಯಶವಂತಪುರ ಕ್ಷೇತ್ರ:ಜನಸ್ಪಂದನ21ರಂದು

ನೀವು ಯಶವಂತಪುರ ವಿಧಾನಸಭಾ ಕ್ಷೇತ್ರದ ನಿವಾಸಿಯೇ? ನಿಮ್ಮ ಮನೆಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲವೇ? ವಾರ್ಡ್‌ನ ರಸ್ತೆಗಳು ಗುಂಡಿ ಬಿದ್ದಿವೆಯೇ? ಉದ್ಯಾನದ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲವೇ... ನಿಮ್ಮ ಕ್ಷೇತ್ರದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೇ? ಹಾಗಾದರೆ, ಕೆಂಗೇರಿ ಉಪನಗರದ ಬಂಡೆಮಠ ಮದುವೆ ಹಾಲ್‌ಗೆ ಇದೇ 21 ರಂದು ಬನ್ನಿ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಜನರ ಅಹವಾಲು ಆಲಿಸುವ ಸಲುವಾಗಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಶನಿವಾರ (ಇದೇ 21) ಇಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಕ್ಷೇತ್ರದ ಶಾಸಕರೂ ಆಗಿರುವ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಹಾಗೂ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಪೊಲೀಸ್‌ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ.

ಆಸಕ್ತರು ಬೆಳಿಗ್ಗೆ 10ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಮೊದಲು ನೋಂದಣಿ ಮಾಡಿಸಿದವರಿಗೆ ಆದ್ಯತೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.