ADVERTISEMENT

ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ದಾಖಲೆ ಬಿಡುಗಡೆ: ಶಾಸಕ ಬಿ.ಕೆ. ಸಂಗಮೇಶ್ವರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 21:02 IST
Last Updated 6 ಮಾರ್ಚ್ 2021, 21:02 IST
ಬಿ.ಕೆ. ಸಂಗಮೇಶ್ವರ
ಬಿ.ಕೆ. ಸಂಗಮೇಶ್ವರ   

ಬೆಂಗಳೂರು: ‘ಆಡಳಿತ ಪಕ್ಷದವರು ವಿರೋಧ ಪಕ್ಷದವರಿಗೆ ಕಾಟ ಕೊಡಬಾರದು. ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ಎಲ್ಲಿಂದ ಎಲ್ಲಿಗೆ ಬಂದಿದ್ದರು ಎನ್ನುವುದು ನನಗೆ ಗೊತ್ತಿದೆ. ಇನ್ನೊಂದು ತಿಂಗಳ ಒಳಗೆ ಎಲ್ಲರ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ’ ಎಂದು ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ವರ ಹೇಳಿದರು.

ಮಗನ ಬಂಧನದ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಾನು ದಾಖಲೆಗಳನ್ನು ಹಿಡಿದುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ಆ ಜನರೇ ಬೇರೆ. ನಾನೇ ಬೇರೆ. ಬಿಜೆಪಿಯವರಿಂದಾಗಿ ನಮಗೂ ಮರ್ಯಾದೆ ಇಲ್ಲದಾಗಿದೆ. ಜನರ ಸೇವೆ ಮಾಡಿ ಎಂದರೆ ಮಜಾ ಮಾಡುತ್ತಾರೆ’ ಎಂದು ಹರಿಹಾಯ್ದರು.

‘ಬಿಜೆಪಿಯವರು ಅಧಿಕಾರ ವ್ಯಾಮೋಹದಿಂದ ಸುಳ್ಳು ಕೇಸು ಹಾಕಿ ದೌರ್ಜನ್ಯ ಮಾಡುತ್ತಿದ್ದಾರೆ. ಬಿಜೆಪಿಗೆ ಭದ್ರಾವತಿಯಲ್ಲಿ ನೆಲೆಯೇ ಇಲ್ಲ. ಬಿಜೆಪಿ ಬೀಜ ಬಿತ್ತಬೇಕು ಎಂದು ಗಲಾಟೆ ಮಾಡಿಸುತ್ತಿದ್ದಾರೆ. ಆದರೆ, ಅಲ್ಲಿನ ಜನ ಬಿಜೆಪಿಯನ್ನು ಒಪ್ಪುವುದಿಲ್ಲ. ಸೌಹಾರ್ದ, ಪ್ರೀತಿಯಿಂದ ಭದ್ರಾವತಿ ಜನ ಬದುಕುತ್ತಿದ್ದಾರೆ. ಆದರೆ, ಯಡಿಯೂರಪ್ಪ, ರಾಘವೇಂದ್ರ, ಈಶ್ವರಪ್ಪ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನನ್ನ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆ ಬಗ್ಗೆ ಅಧಿವೇಶನದಲ್ಲಿ ಗಮನಸೆಳೆಯಲು ಮುಂದಾದೆ. ಸಭಾಧ್ಯಕ್ಷರು ಮನ್ನಣೆ ಕೊಡಲಿಲ್ಲ. ಅಂಗಿ ಬಿಚ್ಚಿದಾಗಲಾದರೂ ಮನ್ನಣೆ ಕೊಡುತ್ತಾರೆ ಎಂದುಕೊಂಡೆ. ಸಭಾಧ್ಯಕ್ಷರು ನಡೆದುಕೊಂಡಿದ್ದು ಯಾವ ಪ್ರಜಾಪ್ರಭುತ್ವ’ ಎಂದು ಪ್ರಶ್ನಿಸಿದರು.

‘ಮಂಗಳವಾರದಿಂದ ನಮ್ಮ ಜಿಲ್ಲೆಯ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಮುಂದಿನ‌ ಶನಿವಾರ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಕೂಡ ಅಲ್ಲಿಗೆ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಸಂಗಮೇಶ್ವರ ಜೊತೆ ಇದ್ದ ಲಿಂಗಾಯತ ಗಾಣಿಗ ಸ್ವಾಮೀಜಿ ಯೋಗಿ ಕಲ್ಲಿನಾಥ ಕೂಡಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.