ADVERTISEMENT

ಥಳಿತದ ವಿಡಿಯೊ ವೈರಲ್‌ ಆಗಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಕೊಲೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 19:52 IST
Last Updated 17 ಜುಲೈ 2020, 19:52 IST
ಬಂಧಿತ ಆರೋಪಿಗಳು (ಕುಳಿತವರು) ಹಾಗೂ ಅವರನ್ನು ಸೆರೆ ಹಿಡಿದ ಯಲಹಂಕ ಠಾಣೆ ಪೊಲೀಸರ ತಂಡ
ಬಂಧಿತ ಆರೋಪಿಗಳು (ಕುಳಿತವರು) ಹಾಗೂ ಅವರನ್ನು ಸೆರೆ ಹಿಡಿದ ಯಲಹಂಕ ಠಾಣೆ ಪೊಲೀಸರ ತಂಡ   

ಬೆಂಗಳೂರು: ಯಲಹಂಕ ಠಾಣೆ ವ್ಯಾಪ್ತಿಯ ಪಾಲನಹಳ್ಳಿ ಬಳಿ ನಡೆದಿದ್ದ ಕಾಂಗ್ರೆಸ್‌ ಕಾರ್ಯಕರ್ತ ಚನ್ನಕೇಶವ (45) ಎಂಬುವರ ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ದೇವರಾಜ್ (26), ಹೇಮಂತ್ (25), ಮುನಿರಾಜು (24) ಹಾಗೂ ಮುನಿರಾಜು ಅಲಿಯಾಸ್ ಗುಂಡ (28) ಬಂಧಿತರು. ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

‘ನೀರಿನ ಟ್ಯಾಂಕರ್‌ ವ್ಯವಹಾರ ಮಾಡುತ್ತಿದ್ದ ಚನ್ನಕೇಶವ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ತಿಂಗಳ ಹಿಂದಷ್ಟೇ ಚನ್ನಕೇಶವ ಅವರ ನೀರಿನ ಟ್ಯಾಂಕರ್, ಆರೋಪಿಯೊಬ್ಬನ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅದೇ ಕಾರಣಕ್ಕೆ ಚನ್ನಕೇಶವ ಮತ್ತು ಚಾಲಕನ ಮೇಲೆ ಆರೋಪಿ ದೇವರಾಜ್ ಹಾಗೂ ಇತರರು ಹಲ್ಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಹಲ್ಲೆ ವಿಚಾರಕ್ಕಾಗಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಸ್ಥಳೀಯ ಹಿರಿಯರು ಸಂಧಾನ ಮಾಡಿಸಲು ಮುಂದಾಗಿದ್ದರು. ಅದೇ ಸಂದರ್ಭದಲ್ಲೇ ಕೆಲ ಮಹಿಳೆಯರು, ಆರೋಪಿ ದೇವರಾಜ್‌ನನ್ನು ಥಳಿಸಿದ್ದರು. ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಚನ್ನಕೇಶವ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಅದು ವೈರಲ್ ಸಹ ಆಗಿತ್ತು.’

‘ವಿಡಿಯೊ ಅಪ್‌ಲೋಡ್ ಮಾಡಿ ಮರ್ಯಾದೆ ತೆಗೆದನೆಂಬ ಕಾರಣಕ್ಕೆ ಚನ್ನಕೇಶವ ಅವರನ್ನು ಕೊಲೆ ಮಾಡಲು ಸಹಚರರ ಜೊತೆ ಸೇರಿ ದೇವರಾಜ್ ಸಂಚು ರೂಪಿಸಿದ್ದ. ಜುಲೈ 9ರಂದು ರಾತ್ರಿ ಪಾಲನಹಳ್ಳಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಬಳಿ ಚನ್ನಕೇಶವ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಂದಿದ್ದರು’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.