ADVERTISEMENT

ಸೋಂಕು ನಿವಾರಕ ವೈಮಾನಿಕ ಸಿಂಪಡಣೆಗೆ ಚಾಲನೆ

ಜಕ್ಕೂರು ಏರೋಡ್ರೋಮ್‌ನಲ್ಲಿ ಪ್ರಾಯೋಗಿಕ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2021, 21:14 IST
Last Updated 29 ಮೇ 2021, 21:14 IST
ಸೋಂಕು ನಿವಾರಕ ವೈಮಾನಿಕ ಸಿಂಪಡಣೆಗೆ ಕಂದಾಯ ಸಚಿವ ಆರ್.ಅಶೋಕ ಚಾಲನೆ ನೀಡಿದರು. ಶಾಸಕರಾದ ಕೃಷ್ಣ ಬೈರೇಗೌಡ, ಎಸ್.ಆರ್.ವಿಶ್ವನಾಥ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ ಗುಪ್ತ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್ ಪ್ರಸಾದ ಇದ್ದರು.
ಸೋಂಕು ನಿವಾರಕ ವೈಮಾನಿಕ ಸಿಂಪಡಣೆಗೆ ಕಂದಾಯ ಸಚಿವ ಆರ್.ಅಶೋಕ ಚಾಲನೆ ನೀಡಿದರು. ಶಾಸಕರಾದ ಕೃಷ್ಣ ಬೈರೇಗೌಡ, ಎಸ್.ಆರ್.ವಿಶ್ವನಾಥ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ ಗುಪ್ತ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್ ಪ್ರಸಾದ ಇದ್ದರು.   

ಯಲಹಂಕ: ಕೋವಿಡ್ ನಿಯಂತ್ರಣ ಉದ್ದೇಶದಿಂದ ಸೋಂಕು ನಿವಾರಕವನ್ನು ವಿಮಾನದ ಮೂಲಕ ಸಿಂಪಡಿಸಲು ಮುಂದೆ ಬಂದಿರುವ ಏರಿಯಲ್ ವರ್ಕಸ್‌ ಏರೊ ಎಲ್‌ಪಿಪಿ ಸಂಸ್ಥೆಯು ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಿದೆ. ಜಕ್ಕೂರು ಏರೋಡ್ರೊಮ್‌ನಲ್ಲಿ ಕಂದಾಯ ಸಚಿವ ಆರ್.ಅಶೋಕ ಈ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿದರು.

‘ಇದೇ ಮೊದಲ ಬಾರಿಗೆ ಸಾವಯವ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಕಾರ್ಯ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಕಲಾಸಿಪಾಳ್ಯ ಮೊದಲಾದ ಜನದಟ್ಟಣೆಯ ಪ್ರದೇಶಗಳಲ್ಲಿ ಮೂರು ದಿನ ಸಿಂಪಡಣೆ ಮಾಡಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ’ ಎಂದು ಅಶೋಕ ತಿಳಿಸಿದರು.

‘ಇದು ಸಫಲವಾದರೆ ಮುಂದಿನ ದಿನಗಳಲ್ಲಿ ಬೇರೆ ಪ್ರದೇಶಗಳಿಗೆ ವಿಸ್ತರಿಸಲಾಗುವುದು. ಇದು ಸಾವಯವ ದ್ರಾವಣವಾಗಿದ್ದು, ಜನರ ಮೇಲೆ ಸಿಂಪಡಣೆಯಾದರೂ ತೊಂದರೆ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಸಂಸ್ಥೆಯ ಮುಖ್ಯಸ್ಥ ಕ್ಯಾಪ್ಟನ್ ಮುರಳಿ ರಾಮಕೃಷ್ಣನ್, ‘ಅಮೆರಿಕ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವೈಮಾನಿಕ ಸೋಂಕು ನಿವಾರಕ ಸಿಂಪಡಣೆಯಲ್ಲಿ ಪರಿಣಿತಿ ಪಡೆದ ತಂಡ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಾಚರಣೆ ನಡೆಸಲಿದೆ’ ಎಂದು ತಿಳಿಸಿದರು.

‘ಸೂಕ್ಷ್ಮ ಮೈಕ್ರಾನ್ ಕಣಗಳ ಸಾಂದ್ರತೆಯಲ್ಲಿರುವ ಈ ದ್ರಾವಣ, ಗಾಳಿಯಲ್ಲಿ ತೇಲಾಡುತ್ತಿರುವ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳನ್ನು ಕೊಲ್ಲಲಿದೆ. ಸುಮಾರು 300 ಲೀಟರ್‌ಗಳಷ್ಟು ದ್ರಾವಣ ಹೊತ್ತೊಯ್ಯಬಲ್ಲ ಅಮೆರಿಕನ್ ಚಾಂಪಿಯನ್ ಸ್ಕೌಟ್ ವಿಮಾನವು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಲಿದೆ. ಗಂಟೆಯಲ್ಲಿ 300 ಹೆಕ್ಟೇರ್‌ ಪ್ರದೇಶದಲ್ಲಿ ಸಿಂಪಡಣೆ ಮಾಡುವ ಸಾಮರ್ಥ್ಯ ಹೊಂದಿದೆ’ ಎಂದು ಮಾಹಿತಿ ನೀಡಿದರು.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಾಂತ್ರಿಕ ತಂಡವು ಈ ಪ್ರಾಯೋಗಿಕ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಲಿದೆ. ಅದರಿಂದ ಉಂಟಾಗಲಿರುವ ಪ್ರಯೋಜನಗಳ ಬಗ್ಗೆ ಮೂರು ದಿನಗಳ ನಂತರ ವರದಿ ನೀಡಲಿದೆ. ಇದೇ ವೇಳೆ ಪ್ರಾಯೋಗಿಕ ಕಾರ್ಯಾಚರಣೆಯ ಪ್ರತ್ಯಕ್ಷಿಕೆಯನ್ನು ಸಂಸ್ಥೆ ಪ್ರದರ್ಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.