ಯಲಹಂಕ: ಕ್ಷೇತ್ರದ ಜಕ್ಕೂರಿನ ಜಿಕೆವಿಕೆ ಬಡಾವಣೆಯಿಂದ ಯಲಹಂಕ ಹಾಗೂ ನಗರದ ಕಡೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಸಮಾನಾಂತರ ರಸ್ತೆಯ ಮೇಲೆ ಅಪಾರ್ಟ್‌ಮೆಂಟ್‌ಗಳ ಕೊಳಚೆನೀರು ಹರಿಯುತ್ತಿದೆ.
ಇದೇ ರಸ್ತೆಯ ಎರಡೂ ಬದಿಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಪರಿಣಾಮ, ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.
ಈ ರಸ್ತೆಯು ಜಕ್ಕೂರು ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ಮೂಲಕ ಯಲಹಂಕ ಮತ್ತು ನಗರದ ಕಡೆಗೆ ಸಂಪರ್ಕಕಲ್ಪಿಸುವ ರಸ್ತೆಯಾಗಿದ್ದು, ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜಿಕೆವಿಕೆ ಬಡಾವಣೆಯ ಮೂಲಕ ತೆರಳುವ ಮಾರ್ಗದ ಆರಂಭದ ತಿರುವಿನ ಬಳಿ ಜಕ್ಕೂರು ಪ್ಲಾಂಟೇಶನ್ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್‌ಗಳ ಮೂಲಕ ಹರಿದುಬರುವ ಕೊಳಚೆನೀರು, ರಸ್ತೆಯ ಪಕ್ಕದ ಗುಂಡಿಯಲ್ಲಿ ಸಂಗ್ರಹವಾಗಿ ನಂತರ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಕೊಳಚೆ ನೀರಿನಮೇಲೆ ವಾಹನಗಳನ್ನು ಚಲಾಯಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆಚ್ಚಿನ ಮಳೆ ಸುರಿದ ಸಂದರ್ಭದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಈ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿರುವುದರ ಜೊತೆಗೆ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಹಾಗೂ ವಾಯುವಿಹಾರಿಗಳು ಕಿರಿಕಿರಿ ಅನುಭವಿಸಬೇಕಾಗಿದೆ ಎಂದು ಸ್ಥಳೀಯರು ಹಾಗೂ ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು ದೂರಿದರು.
‘ಈ ರಸ್ತೆಯು ತೀರಾ ಕಿರಿದಾಗಿದ್ದು, ರಾತ್ರಿ ವೇಳೆಯಲ್ಲಿ ರಸ್ತೆಯ ಎರಡೂ ಕಡೆಗಳಲ್ಲಿ ಅಲ್ಲಲ್ಲಿ ವಾಹನಗಳಲ್ಲಿ ಹಳೆಯ ಕಟ್ಟಡಗಳ ಸಾಮಗ್ರಿಗಳು ಹಾಗೂ ಮನೆಗಳ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದನ್ನು ತಿನ್ನಲು ಬರುವ ನಾಯಿಗಳು ತ್ಯಾಜ್ಯವನ್ನು ರಸ್ತೆಯ ಮೇಲೆಲ್ಲಾ ಹರಡುತ್ತಿವೆ. ಇದರಿಂದ ವಾಹನಗಳ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ’ ಎಂದು ಜಿಕೆವಿಕೆ ಬಡಾವಣೆಯ ನಿವಾಸಿ ರವಿಕುಮಾರ್ ಹೇಳಿದರು.
‘ಅಧಿಕಾರಿಗಳು, ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡುವವರು ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ರಸ್ತೆಗೆ ಕೊಳಚೆನೀರು ಹರಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು. ಅಲ್ಲದೆ ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ಬಡಾವಣೆಯಲ್ಲಿ ಬೀಡಾಡಿ ನಾಯಿಗಳ ಕಾಟ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಗುಂಪುಗುಂಪಾಗಿ ಸೇರುವ ನಾಯಿಗಳು, ಕಿತ್ತಾಡಿಕೊಂಡು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳ ಮೇಲೆ ದಾಳಿಮಾಡಲು ಬರುತ್ತವೆ’ ಎಂದು ಸ್ಥಳೀಯ ನಿವಾಸಿ ವಿ.ನಾಗರಾಜಪ್ಪ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.