ADVERTISEMENT

ಯಲಹಂಕ | ಏಕಾಏಕಿ ರಸ್ತೆ ಬಂದ್‌: ಶಾಲಾ ಮಕ್ಕಳ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 18:50 IST
Last Updated 19 ಸೆಪ್ಟೆಂಬರ್ 2025, 18:50 IST
ಆವಲಹಳ್ಳಿ ಸಮೀಪ ರಸ್ತೆಯಲ್ಲಿ ಗುಂಡಿ ತೋಡಿರುವುದು
ಆವಲಹಳ್ಳಿ ಸಮೀಪ ರಸ್ತೆಯಲ್ಲಿ ಗುಂಡಿ ತೋಡಿರುವುದು   

ಯಲಹಂಕ: ಆವಲಹಳ್ಳಿ ಸಮೀಪದ ಪ್ರೆಸಿಡೆನ್ಸಿ ಶಾಲೆಯ ಬಳಿ ಶಾಲಾ ವಾಹನಗಳು, ಮಕ್ಕಳು ಹಾಗೂ ಪೋಷಕರು, ಓಡಾಡುತ್ತಿದ್ದ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಶುಕ್ರವಾರ ಏಕಾಏಕಿ ಬಂದ್‌ ಮಾಡಿದ ಪರಿಣಾಮ, ವಿದ್ಯಾರ್ಥಿಗಳು ಶಾಲೆಗೆ ತೆರಳಲು ತೊಂದರೆ ಅನುಭವಿಸಿದರು.

ಹಲವು ವರ್ಷಗಳಿಂದ ಪ್ರೆಸಿಡೆನ್ಸಿ ಶಾಲೆಯ ವಾಹನಗಳು, ಮಕ್ಕಳು ಮತ್ತು ಪೋಷಕರು ಈ ರಸ್ತೆಯನ್ನು ಬಳಸುತ್ತಿದ್ದರು. ಆದರೆ ಈ ರಸ್ತೆಯು ನಮಗೆ ಸೇರಿದ್ದೆಂದು ಹೇಳಿಕೊಂಡಿದ್ದ ಪಕ್ಕದ ಜಮೀನಿನ ಮಾಲೀಕರಾದ ವಸಂತ ಎಂಬ ಮಹಿಳೆ ಮತ್ತು ಪ್ರೆಸಿಡೆನ್ಸಿ ಶಾಲೆಯ ನಡುವೆ ಹಲವಾರು ವರ್ಷಗಳಿಂದ ವಿವಾದ ಏರ್ಪಟ್ಟಿತ್ತು. ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಇದೇ ವಿವಾದಕ್ಕೆ ಸಂಬಂಧಿಸಿದಂತೆ ಪ್ರೆಸಿಡೆನ್ಸಿ ಶಾಲೆಯವರು 2017ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 

ಜಮೀನಿನ ಮಾಲೀಕರು ರಸ್ತೆಯು ತಮ್ಮ ಪರವಾಗಿ ಆಗಿದೆ ಎಂದು ಎರಡು ದಿನಗಳ ಹಿಂದೆ ಜೆಸಿಬಿಯಿಂದ ರಸ್ತೆಯಲ್ಲಿ ಗುಂಡಿ ತೆಗೆಸಿದ್ದರು. ಗುರುವಾರ ಪ್ರೆಸಿಡೆನ್ಸಿ ಶಾಲೆಯವರು ಹೈಕೋರ್ಟ್‌ನ ಮೊರೆಹೋಗಿ ಈ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.

ADVERTISEMENT

ವಿಚಾರಣೆ ವೇಳೆ, ಸದ್ಯಕ್ಕೆ ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆಯಾಗದಂತೆ ಮುಂದಿನ ವಿಚಾರಣೆಯವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿತ್ತು.

ಈ ಮಧ್ಯೆ ಜಮೀನಿನ ಮಾಲೀಕರು ಶುಕ್ರವಾರ ಮತ್ತೆ ರಸ್ತೆಯಲ್ಲಿ ಗುಂಡಿ ತೋಡಿದ್ದರಿಂದ ಸಮಸ್ಯೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ರಾಜಾನುಕುಂಟೆ ಪೊಲೀಸರು, ಜಮೀನಿನ ಮಾಲೀಕರಿಗೆ ಕೋರ್ಟ್‌ ಆದೇಶದ ಪ್ರತಿಯನ್ನು ತೋರಿಸಿ, ರಸ್ತೆಯನ್ನು ಮುಚ್ಚಲು ವ್ಯವಸ್ಥೆ ಕಲ್ಪಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.