ADVERTISEMENT

ಯಲಹಂಕ ಟೌನ್‌ಶಿಪ್ ಅಭಿವೃದ್ಧಿ: 50:50ರ ಅನುಪಾತದಲ್ಲಿ ಪರಿಹಾರ ನೀಡಲು ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಯಲಹಂಕದಲ್ಲಿ ₹2,930 ಕೋಟಿ ವೆಚ್ಚದ ಅತ್ಯಾಧುನಿಕ ಟೌನ್‌ಶಿಪ್‌ ನಿರ್ಮಾಣವೂ ಸೇರಿ, ನಗರದಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಯಲಹಂಕ ತಾಲ್ಲೂಕು ವ್ಯಾಪ್ತಿಯ ಜಾಲ–1 ಹೋಬಳಿ, ಚಿಕ್ಕಜಾಲ, ಮೀನುಕುಂಟೆ ಗ್ರಾಮದಲ್ಲಿ ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನಿನಲ್ಲಿ ಟೌನ್‌ಶಿಪ್‌ ನಿರ್ಮಾಣ ಮಾಡಲಾಗುತ್ತದೆ. ಸದರಿ ಜಮೀನುಗಳ ಮಾಲೀಕರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಜಮೀನು ನೀಡುವುದು ಮತ್ತು ಉಳಿಕೆ ಜಮೀನಿನಲ್ಲಿ ಟೌನ್‌ಶಿಪ್‌ ನಿರ್ಮಾಣ ಮಾಡಲು ಕರ್ನಾಟಕ ಗೃಹ ಮಂಡಳಿ ಪ್ರಸ್ತಾವ ಸಲ್ಲಿಸಿತ್ತು.

ADVERTISEMENT

ಉದ್ದೇಶಿತ ಟೌನ್‌ಶಿಪ್‌ ಪ್ರದೇಶದ ವ್ಯಾಪ್ತಿಯಲ್ಲಿ ರೈತರು 43 ಎಕರೆಯಷ್ಟು ಜಮೀನು ನೀಡಿದ್ದಾರೆ.

ವಸತಿ ಯೋಜನೆಗಳಿಗೆ ಭೂಸ್ವಾಧೀನ ಪಡಿಸಿಕೊಂಡ ಜಮೀನುಗಳ ಮಾಲೀಕರಿಗೆ 50:50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಜಮೀನು ನೀಡಲೂ ಸಂಪುಟವು ಒಪ್ಪಿಗೆ ನೀಡಿದಂತಾಗಿದೆ.

₹2,930 ಕೋಟಿ ವೆಚ್ಚವನ್ನು ಗೃಹಮಂಡಳಿಯೇ ಭರಿಸಿ ಅಥವಾ ಖಾಸಗಿ ನಿರ್ಮಾಣ ಕಂಪನಿಗಳ ಜಂಟಿ ಸಹಭಾಗಿತ್ವದಲ್ಲಿ ಟೌನ್‌ಶಿಪ್‌ ಅಭಿವೃದ್ಧಿಪಡಿಸಲು, ಬೆಂಗಳೂರು ಅಂತರರಾಷ್ಟ್ರೀಯ  ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದಿಂದ ಭೂ–ಉಪಯೋಗ ಬದಲಾವಣೆಗೆ ಅನುಮೋದನೆ ಪಡೆಯಲು ಹಾಗೂ ಈ ವ್ಯವಹಾರಗಳಿಗೆ ಸಲಹಾಧಿಕಾರಿಯನ್ನು ನೇಮಕ ಮಾಡಲು ಸಂಪುಟವು ಒಪ್ಪಿಗೆ ನೀಡಿದೆ.

ಪ್ರಮುಖ ಯೋಜನೆಗಳು

* ಮಡಿವಾಳ, ಕಾಡುಬೀಸನಹಳ್ಳಿ, ಕಾಡುಗೋಡಿ, ಕೋರಮಂಗಲ, ಬಸವಪುರ ಮತ್ತು ಬೆಳ್ಳಂದೂರು ಅಮಾನಿ ಖಾನೆ ವ್ಯಾಪ್ತಿಯಲ್ಲಿ, ₹956.67 ಕೋಟಿ ವೆಚ್ಚದಲ್ಲಿ 6 ಕೊಳಚೆ ನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ

* ಜಲಮಂಡಳಿ ಕ್ಲೇವ್‌ ಲೈನ್‌ ಜಲಸಂಗ್ರಹಗಾರ ಠಾಣೆಯಲ್ಲಿರುವ ಕಲ್ಲಿನ ಸಂಗ್ರಹಗಾರವನ್ನು ಕೆಡವಿ, ₹21.65 ಕೋಟಿ ವೆಚ್ಚದ ಆರ್‌ಸಿಸಿ ಟ್ಯಾಂಕ್ ನಿರ್ಮಾಣ

* ಕೆಂಗೇರಿಯಲ್ಲಿರುವ ಕೊಳಚೆ ನೀರು ಸಂಸ್ಕರಣಾ ಘಟಕದ ಸಾಮರ್ಥ್ಯವನ್ನು 60 ಎಂಎಲ್‌ಡಿಯಿಂದ 80 ಎಂಎಲ್‌ಡಿಗೆ ಹೆಚ್ಚಿಸಲು ₹28.88 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ

* ಒಟ್ಟು ₹722.72 ಕೋಟಿ ವೆಚ್ಚದಲ್ಲಿ, ದೊಡ್ಡಬೆಲೆ ಮತ್ತು ಮೈಲಸಂದ್ರದಲ್ಲಿ ತಲಾ 100 ಎಂಎಲ್‌ಡಿ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.