ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ನಾಲ್ಕನೇ ರೈಲು ಸಂಚರಿಸಲಿದೆ. ಆಗ ಪ್ರತಿ ಟ್ರಿಪ್‌ನ ಅಂತರವು 25 ನಿಮಿಷದ ಬದಲು 20 ನಿಮಿಷಕ್ಕೆ ಇಳಿಯಲಿದೆ.
ಆಗಸ್ಟ್ 15ಕ್ಕೆ ನಾಲ್ಕನೇ ರೈಲಿನ ಎಲ್ಲ ಆರು ಕೋಚ್‌ಗಳು ಹೆಬ್ಬಗೋಡಿ ಡಿಪೊಗೆ ಬಂದು ಸೇರಿದ್ದು, ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆ ಮುಗಿದ ಕೂಡಲೇ ಸಂಚಾರಕ್ಕೆ ಲಭ್ಯವಾಗಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಆರ್.ವಿ. ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ವಾಣಿಜ್ಯ ಸಂಚಾರಕ್ಕೆ ಆ.10ರಂದು ಚಾಲನೆ ನೀಡಲಾಗಿತ್ತು. ಆ.11ರಿಂದ ಸಂಚಾರ ಆರಂಭವಾಗಿತ್ತು. ಮೂರೇ ರೈಲು ಇದ್ದಿದ್ದರಿಂದ 25 ನಿಮಿಷಕ್ಕೊಂದು ಟ್ರಿಪ್‌ನಂತೆ ಮೆಟ್ರೊ ಸಂಚಾರ ನಿಗದಿ ಮಾಡಲಾಗಿತ್ತು. ಅಂತರ 25 ನಿಮಿಷ ಇರುವುದರಿಂದ ಪ್ರಯಾಣಿಕರ ಸಂಖ್ಯೆ 25 ಸಾವಿರದಿಂದ ಗರಿಷ್ಠ 50 ಸಾವಿರವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ಐಟಿ ಹಬ್ ಸಂಪರ್ಕಿಸುವುದರಿಂದ ನಿರೀಕ್ಷೆ ಮೀರಿ ಜನಸಂಚಾರ ಆರಂಭವಾಗಿತ್ತು. ರೈಲುಗಳ ಸಂಚಾರದ ನಡುವಿನ ಅವಧಿ ಕಡಿಮೆ ಮಾಡಬೇಕು ಎಂದು ಪ್ರಯಾಣಿಕರು ಬೇಡಿಕೆ ಇಡುತ್ತಲೇ 25 ನಿಮಿಷ ಕಾದು ಮೆಟ್ರೊದಲ್ಲಿ ಸಂಚರಿಸತೊಡಗಿದರು. ಅಲ್ಲಿಯವರೆಗೆ ‘ನಮ್ಮ ಮೆಟ್ರೊ’ದಲ್ಲಿ 8 ಲಕ್ಷ ಇದ್ದ ಪ್ರಯಾಣಿಕರ ಸರಾಸರಿ ಪ್ರಮಾಣ 9.5 ಲಕ್ಷಕ್ಕೆ ಏರಿತ್ತು. ಮೊದಲ 15 ದಿನಗಳಲ್ಲಿ ಮೂರು ಬಾರಿ 10 ಲಕ್ಷದ ಗಡಿ ದಾಟಿತ್ತು.
‘ವಾಹನ ದಟ್ಟಣೆ ಅಧಿಕ ಇರುವುದರಿಂದ ಜನರು ರಸ್ತೆಯಲ್ಲಿ ಸಮಯ ವ್ಯರ್ಥ ಮಾಡಲು ಬಯಸದೇ ನಮ್ಮ ಮೆಟ್ರೊದಲ್ಲಿ ಸಂಚರಿಸಲು ಬಯಸಿದ್ದರಿಂದ ನಮ್ಮ ನಿರೀಕ್ಷೆ ಮೀರಿ ಪ್ರಯಾಣಿಕರ ಸಂಖ್ಯೆ ಏರಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ರಮಾನಂದ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಜನದಟ್ಟಣೆಗೆ ಅನುಗುಣವಾಗಿ ಮೆಟ್ರೊ ಸಂಚರಿಸಲಿದೆ. ಒಂದೆರಡು ವಾರದಲ್ಲಿ ನಾಲ್ಕನೇ ರೈಲು ಸಂಚರಿಸಲಿದೆ. ಬಳಿಕ ತಿಂಗಳಿಗೊಂದರಂತೆ ಮೆಟ್ರೊ ಕೋಚ್ ಸೆಟ್‌ಗಳು ನಮ್ಮ ಡಿಪೊಗೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ’ ಎಂದು ನಮ್ಮ ಮೆಟ್ರೊ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶವಂತ್ ಚವಾಣ್ ಮಾಹಿತಿ ನೀಡಿದರು.
ಹಳದಿ ಮಾರ್ಗದಲ್ಲಿ ರೈಲು ಸಂಚಾರ ಇರುವುದರಿಂದ ಈ ಸಮಯದಲ್ಲಿ ಹೊಸ ರೈಲಿನ ಪರೀಕ್ಷೆ ನಡೆಸಲು ಸಾಧ್ಯವಿಲ್ಲದಂತಾಗಿದೆ. ದಿನದ ಸಂಚಾರ ಮುಕ್ತಾಯಗೊಂಡ ಬಳಿಕ ರಾತ್ರಿ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ಪರೀಕ್ಷೆ ನಿಧಾನವಾಗಿದೆ. ಯಾವುದೇ ತಾಂತ್ರಿಕ ದೋಷ ಕಂಡುಬರದೇ ಇದ್ದರೆ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ನಾಲ್ಕನೇ ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಗಣೇಶನ ಹಬ್ಬ: ಕಡಿಮೆಯಾದ ಸಂಚಾರ
ಆಗಸ್ಟ್ 11ರಿಂದ 26ರವರೆಗೆ ಮೆಟ್ರೊ ರೈಲಿನಲ್ಲಿ ಸಂಚರಿಸುವವರ ಪ್ರಮಾಣ 9.5 ಲಕ್ಷ ಇತ್ತು. ಆದರೆ ಗಣೇಶ ಚತುರ್ಥಿ ಪ್ರಯುಕ್ತ ಜನರು ಊರಿಗೆ ಹೋಗಿರುವುದರಿಂದ ಮೆಟ್ರೊ ಪ್ರಯಾಣಿಕರ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಬುಧವಾರ ಕೇವಲ 4.38 ಲಕ್ಷ ಜನರು ಪ್ರಯಾಣಿಸಿದ್ದಾರೆ. ‘ಹಬ್ಬ ಮುಗಿಸಿ ಜನರು ವಾಪಸ್ಸಾಗುತ್ತಿದ್ದಾರೆ. ಗುರುವಾರ 8.54 ಲಕ್ಷ ಜನರು ಸಂಚರಿಸಿದ್ದಾರೆ. ಆದರೂ ಹಿಂದಿನ ಸರಾಸರಿಗೆ ತಲುಪಲು ಮುಂದಿನ ಸೋಮವಾರದವರೆಗೆ (ಸೆ.1) ಕಾಯಬೇಕಾಗಬಹುದು’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.