ADVERTISEMENT

ಯಶವಂತಪುರ ಮಾರುಕಟ್ಟೆ ಭಣ–ಭಣ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:27 IST
Last Updated 5 ಅಕ್ಟೋಬರ್ 2019, 19:27 IST
ಯಶವಂತಪುರ ಮಾರುಕಟ್ಟೆಯಲ್ಲಿ ಗ್ರಾಹಕರ ನಿರೀಕ್ಷೆಯಲ್ಲಿ ಕುಳಿತಿರುವ ವರ್ತಕರು ಪ್ರಜಾವಾಣಿ ಚಿತ್ರ–ಬಿ.ಎಚ್. ಶಿವಕುಮಾರ್‌
ಯಶವಂತಪುರ ಮಾರುಕಟ್ಟೆಯಲ್ಲಿ ಗ್ರಾಹಕರ ನಿರೀಕ್ಷೆಯಲ್ಲಿ ಕುಳಿತಿರುವ ವರ್ತಕರು ಪ್ರಜಾವಾಣಿ ಚಿತ್ರ–ಬಿ.ಎಚ್. ಶಿವಕುಮಾರ್‌   

ಬೆಂಗಳೂರು: ಆರ್ಥಿಕ ಹಿಂಜರಿತದಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲಾದ ಪರಿಣಾಮ ಶನಿವಾರ ಯಶವಂತಪುರ ಮಾರುಕಟ್ಟೆಯಲ್ಲಿಯೂ ಗೋಚರಿಸಿತು. ಯಶವಂತಪುರದಲ್ಲಿ ಹೂವು–ಹಣ್ಣುಗಳ ಮಾರಾಟವೂ ಕ್ಷೀಣಿಸಿತ್ತು.

ಆಯುಧ ಪೂಜೆ ಮತ್ತು ವಿಜಯದಶಮಿ ಅಂಗವಾಗಿ 9 ದಿನ ನಡೆಯುವ ಹಬ್ಬದಲ್ಲಿ ಈ ಮಾರುಕಟ್ಟೆಯಲ್ಲಿ ಹೆಚ್ಚು ವ್ಯಾಪಾರವಾಗುತ್ತಿತ್ತು. ನಿತ್ಯ ಉಂಟಾಗುವ ನಷ್ಟವನ್ನು ಈ ಒಂಬತ್ತು ದಿನಗಳಲ್ಲಿ ವ್ಯಾಪಾರಿಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಪರಿಸ್ಥಿತಿ ತೀರಾ ಭಿನ್ನವಾಗಿದೆ ಎನ್ನುತ್ತಾರೆ ವರ್ತಕರು.

‘ಆನ್‌ಲೈನ್‌ ವಹಿವಾಟಿಗೆ ಸರ್ಕಾರವೇ ಬೆಂಬಲ ನೀಡುತ್ತಿರುವುದರಿಂದ ಸಗಟು ವ್ಯಾಪಾರಸ್ಥರು ಆಗಲೇ ಸಂಕಷ್ಟದಲ್ಲಿದ್ದಾರೆ. ಈಗ, ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎನ್ನುತ್ತಾರೆ ಯಶವಂತಪುರ ಎಪಿಎಂಸಿ ವರ್ತಕರ ಒಕ್ಕೂಟದ ಅಧ್ಯಕ್ಷ ರಮೇಶ್‌ ಚಂದ್ರ ಲಾಹೋಟಿ ಹೇಳಿದರು.

ADVERTISEMENT

‘ವೇ ಟು ಅಗ್ರಿ ಬಿಸಿನೆಸ್‌’ ನವೋದ್ಯಮದ ಮಾಲೀಕ ಡಿ. ಪ್ರಸನ್ನ, ‘ರೈತರು ಮತ್ತು ವರ್ತಕರ ನಡುವಿನ ಕೊಂಡಿಯಾಗಿ ನಮ್ಮ ಕಂಪನಿ ಕಾರ್ಯನಿರ್ವಹಿಸುತ್ತದೆ. ಈ ಬಾರಿ ನಷ್ಟ ಅನುಭವಿಸಿದ್ದೇವೆ ಎಂದುಶೇ 50ಕ್ಕೂ ಹೆಚ್ಚು ವರ್ತಕರು ಹೇಳಿಕೊಂಡಿದ್ದಾರೆ’ ಎಂದರು.

ಬೀದಿ ಬದಿ ವ್ಯಾಪಾರಿಗಳ ಅಭಿಪ್ರಾಯವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ‘ಪ್ರತಿ ವರ್ಷ ಬರುತ್ತಿದ್ದ ಬಹುತೇಕ ಗ್ರಾಹಕರು ಈ ವರ್ಷ ಮಾರುಕಟ್ಟೆಯತ್ತ ಮುಖಮಾಡಿಲ್ಲ. ಆಯುಧಪೂಜೆಗಾಗಿ ಮಾರಾಟಕ್ಕೆ ತಂದ ಅನೇಕ ಸಾಮಗ್ರಿಗಳು ಮಾರಾಟವಾಗದೇ ಉಳಿದಿವೆ’ ಎಂದು ಬೀದಿ ಬದಿ ವ್ಯಾಪಾರಿ ಬಿ. ಮಲ್ಲೇಶ್‌ ಹೇಳಿದರು.

ಪೀಣ್ಯ ಕೈಗಾರಿಕಾ ಸಂಘಟನೆಯ ಗೌರವ ಕಾರ್ಯದರ್ಶಿ ಎಚ್.ಎಂ. ಆರಿಫ್‌, ‘ಆರ್ಥಿಕ ಹಿಂಜರಿತದಂತಹ ಸ್ಥಿತಿ ಮುಂದಿನ ಮಾರ್ಚ್‌ವರೆಗೂ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.