ಬೆಂಗಳೂರು: ಯೋಗ ಕಲಿಯಲು ಬರುತ್ತಿದ್ದ ಬಾಲಕಿಗೆ ಅಂತರರಾಷ್ಟ್ರೀಯ ಮಟ್ಟದ ಯೋಗಪಟುವನ್ನಾಗಿ ಮಾಡುವುದಾಗಿ ಆಮಿಷವೊಡ್ಡಿ ಅತ್ಯಾಚಾರವೆಸಗಿದ ಆರೋಪದಡಿ ಯೋಗ ಗುರುವನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ.
ಸನ್ ಶೈನ್ ದಿ ಯೋಗ ಝೋನ್ ಸಂಸ್ಥಾಪಕ ಎಂ. ನಿರಂಜನಮೂರ್ತಿ (55) ಬಂಧಿತ ಯೋಗ ಗುರು.
ಆಗಸ್ಟ್ 30ರಂದು ಸಂತ್ರಸ್ತೆ ನೀಡಿದ ದೂರು ಆಧರಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಯು ಆರ್. ಆರ್. ನಗರದ ಸನ್‌ಶೈನ್ ಇನ್ಸ್ಟಿಟ್ಯೂಟ್ ಹೆಸರಲ್ಲಿ 2019ರಿಂದ ಯೋಗ ತರಗತಿ ನಡೆಸುತ್ತಿದ್ದರು. 2021ರಲ್ಲಿ ಯೋಗ ತರಗತಿಗೆ ಸೇರಿದ್ದ ಬಾಲಕಿ, ಯೋಗಗುರು ಜತೆ ಥಾಯ್ಲೆಂಡ್ನಲ್ಲಿ ನಡೆದಿದ್ದ ಯೋಗ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಆರೋಪಿ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೆ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ ಬಾಲಕಿಯು, ಆರೋಪಿ ಒಡೆತನದ ಯೋಗ ಕೇಂದ್ರಕ್ಕೆ 2024ರಲ್ಲಿ ಸೇರಿಕೊಂಡಿದ್ದಳು. ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪದಕ ಹಾಗೂ ಒಳ್ಳೆಯ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಕಳೆದ ಆಗಸ್ಟ್ನಲ್ಲಿ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ತನಿಖೆ ನಡೆಯುತ್ತಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.