
ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ರಾತ್ರಿ ವೇಳೆ ಕೆಲಸ ಮುಗಿಸಿ ಬರುವ ಮಹಿಳೆಯರಲ್ಲಿ ಇದು ಅಸುರಕ್ಷತೆಯ ಭಾವನೆ ತಳೆಯಲು ಕಾರಣವಾಗಿದೆ. ನಡೆದುಕೊಂಡು ಹೋಗುತ್ತಿರುವ ವೇಳೆ, ವಾಹನಗಳಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿರುವ ಉದಾಹರಣೆಗಳು ಸಾಕಷ್ಟಿವೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಂಗಳೂರಿನ ಆಟೊ ಚಾಲಕರೊಬ್ಬರ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಾಲಕನ ಸೀಟಿನ ಹಿಂದೆ ಬರಹವೊಂದು ಅಂಟಿಸಿರುವ ಅವರು, ‘ನಾನೂ ಒಬ್ಬ ಅಣ್ಣ/ತಂದೆ, ನಿಮ್ಮ ಸುರಕ್ಷತೆಯೇ ನನಗೆ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ’ ಎಂದು ಧೈರ್ಯ ತುಂಬಿದ್ದಾರೆ.
ಈ ಬರಹವನ್ನು ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಈಗ ರಾತ್ರಿ 12 ಗಂಟೆ... ರ್‍ಯಾಪಿಡೊ ಆಟೊದಲ್ಲಿ ನಾನು ಪ್ರಯಾಣಿಸುತ್ತಿದ್ದೇನೆ. ಆಟೊದಲ್ಲಿ ಕುಳಿತ ತಕ್ಷಣ ಈ ಬರಹವನ್ನು ಓದಿದೆ. ಈಗ ನಿಜವಾಗಿಯೂ ಸುರಕ್ಷಿತ ಭಾವನೆ ಮೂಡುತ್ತಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ, ಅವರ(ಆಟೊ ಚಾಲಕ) ಹೆಸರು ಮತ್ತು ಪರಿಚಯವನ್ನು ಅವರು ಹಂಚಿಕೊಂಡಿಲ್ಲ.
ಆಟೊ ಚಾಲಕನ ಕಾರ್ಯಕ್ಕೆ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣಾ ಎಂದು ಹಾರೈಸಿದ್ದಾರೆ.
‘ಇಂತಹ ಸಣ್ಣ ಕೆಲಸಗಳು ಮಹಿಳೆಯರಿಗೆ ಸುರಕ್ಷಿತ ಭಾವೆನಯನ್ನು ಮೂಡಿಸುತ್ತದೆ’ ಎಂದು ‘ಎಕ್ಸ್’ ಬಳಕೆದಾರರೊಬ್ಬರು ಹೇಳಿದ್ದಾರೆ.
‘ನಮಗೆ ಬೇಕಿರುವುದು ಇಷ್ಟೇ. ಸುರಕ್ಷತೆ ಒಂದೇ ನಾವು ಕೇಳುವುದು’ ಎಂದು ಮಹಿಳಾ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.