
ಯಲಹಂಕ: ‘ಯುವಕರು ರಾಷ್ಟ್ರದ ಅತ್ಯಂತ ಪ್ರಬಲ ಆಸ್ತಿಯಾಗಿದ್ದು, ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಬೇಕು’ ಎಂದು ಎಬಿಆರ್‌ಎಸ್‌ಎಂ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಗುಂತಾ ಲಕ್ಷ್ಮಣ್ ಹೇಳಿದರು.
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪರಿವರ್ತನಾ ಟ್ರಸ್ಟ್ ಆಯೋಜಿಸಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಯುವಶಕ್ತಿ ಸರಿಯಾದ ಮಾರ್ಗದಲ್ಲಿ ಸಾಗಿದಾಗ ಮಾತ್ರ ಬಲಿಷ್ಠರಾಷ್ಟ್ರ ನಿರ್ಮಾಣ ಸಾಧ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಮಾದಕದ್ರವ್ಯ ಬಳಕೆಯಿಂದ ದೂರವಿದ್ದು, ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪರಿವರ್ತನಾ ಟ್ರಸ್ಟ್‌ನ ಟ್ರಸ್ಟಿ ವಿ.ಎಸ್.ಹೆಗ್ಡೆ ಮಾತನಾಡಿ, ‘ಮಾದಕ ದ್ರವ್ಯ ವ್ಯಸನವು ಅನೇಕ ವಿದ್ಯಾರ್ಥಿಗಳ ಜೀವನ ಮತ್ತು ವೃತ್ತಿಜೀವನವನ್ನು ಹಾಳುಮಾಡಿದೆ. ಯುವಕರು ಮಾದಕ ದ್ರವ್ಯಗಳಿಂದ ದೂರವಿದ್ದು, ಶಿಕ್ಷಣ ಮತ್ತು ಭವಿಷ್ಯದತ್ತ ಗಮನಹರಿಸಬೇಕು’ ಎಂದು ಮನವಿ ಮಾಡಿದರು.
ಪರಿವರ್ತನಾ ಟ್ರಸ್ಟ್ ಇದುವರೆಗೆ 23 ರಾಜ್ಯಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದು, 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 10 ಸಾವಿರಕ್ಕೂ ಹೆಚ್ಚು ಯುವಕರನ್ನು ತಲುಪಿದೆ ಎಂದರು.
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಎಸ್.ಜೆ. ತಿರುವೆಂಗಡಂ, ಸಹ ಕುಲಪತಿ ವಿದ್ಯಾಶಂಕರ್ ಶೆಟ್ಟಿ, ಬಿಜೆಪಿ ಮುಖಂಡ ರಾಜಣ್ಣ.ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.