ADVERTISEMENT

ಕಳ್ಳತನ: ‘ಇನ್‌ಸ್ಟಾಗ್ರಾಂ’ ಗೆಳೆಯ ಬಂಧನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 0:56 IST
Last Updated 27 ಆಗಸ್ಟ್ 2021, 0:56 IST
ಆರೋಪಿಯಿಂದ ಜಪ್ತಿ ಮಾಡಲಾದ ಚಿನ್ನದ ಆಭರಣಗಳು
ಆರೋಪಿಯಿಂದ ಜಪ್ತಿ ಮಾಡಲಾದ ಚಿನ್ನದ ಆಭರಣಗಳು   

ಬೆಂಗಳೂರು: ಗಂಗಮ್ಮನಗುಡಿ ಠಾಣೆಯ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಆರೋಪಿ ಅಭಿಗೌಡ ಅಲಿಯಾಸ್ ಘನಶ್ಯಾಮ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಅಬ್ಬಿಗೆರೆಯ ಕೆಂಪೇಗೌಡ ಗಾರ್ಡನ್ ರಸ್ತೆಯಲ್ಲಿರುವ ಮನೆಯಲ್ಲಿ ಕಳ್ಳತನ ಆಗಿತ್ತು. ಮನೆ ಮಾಲೀಕ ನೀಡಿದ್ದ ದೂರಿನಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ ₹ 8 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಅಭಿಗೌಡ, ‘ಇನ್‌ಸ್ಟಾಗ್ರಾಮ್’ ಆ್ಯಪ್‌ನಲ್ಲಿ ಖಾತೆ ಹೊಂದಿದ್ದಾನೆ. ಮನೆ ಮಾಲೀಕರ ಮಗಳು ಸಹ ಇನ್‌ಸ್ಟಾಗ್ರಾಮ್ ಆ್ಯಪ್ ಬಳಸುತ್ತಿದ್ದರು. ಆ್ಯಪ್‌ ಮೂಲಕ ಯುವತಿ ಸ್ನೇಹ ಸಂಪಾದಿಸಿದ್ದ ಆರೋಪಿ, ಹೆಚ್ಚು ಮಾತನಾಡಲಾರಂಭಿಸಿದ್ದ. ಅವರಿಬ್ಬರು ಹಲವು ಬಾರಿ ಭೇಟಿ ಆಗಿದ್ದರು. ಹಲವೆಡೆ ಸುತ್ತಾಡಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಯುವತಿ ಬಳಿಯ ಚಿನ್ನದ ಸರ ಪಡೆದಿದ್ದ ಆರೋಪಿ, ಅದನ್ನು ಅಡವಿಟ್ಟು ಹಣ ಪಡೆದಿದ್ದ. ಮೋಜು– ಮಸ್ತಿಗಾಗಿ ಹಣ ಖರ್ಚು ಮಾಡಿದ್ದ. ಮತ್ತಷ್ಟು ಹಣ ಬೇಕಾದಾಗ, ಚಿನ್ನದ ಸರಗಳನ್ನು ತಂದುಕೊಡುವಂತೆ ಕೇಳಿದ್ದ. ಅದಕ್ಕೆ ಯುವತಿ ಒಪ್ಪಿರಲಿಲ್ಲ. ‘ಚಿನ್ನ ತರದಿದ್ದರೆ, ನಮ್ಮಿಬ್ಬರ ಸಂಬಂಧವನ್ನು ನಿಮ್ಮ ತಂದೆಗೆ ಹೇಳುತ್ತೇನೆ’ ಎಂದು ಆರೋಪಿ ಬೆದರಿಸಿದ್ದ.’

‘ಯುವತಿಯೊಬ್ಬಳೇ ಇರುವಾಗ ಮನೆಗೆ ಹೋಗಿದ್ದ ಆರೋಪಿ, ಮನೆಯಲ್ಲೆಲ್ಲ ಹುಡುಕಾಟ ನಡೆಸಿದ್ದ. ಬೀರುವಿನಲ್ಲಿಟ್ಟಿದ್ದ ಚಿನ್ನದ ಆಭರಣ ಕದ್ದುಕೊಂಡು ಹೋಗಿದ್ದ. ಆಭರಣವನ್ನು ಮಾರಿದ್ದ ಆತ, ಅದೇ ಹಣದಲ್ಲೇ ಮೋಜು–ಮಸ್ತಿ ಮಾಡುತ್ತಿದ್ದ’ ಎಂದೂ ಪೊಲೀಸರು ಹೇಳಿದರು.

‘ಪ್ರಕರಣ ದಾಖಲಾಗುತ್ತಿದ್ದಂತೆ ಮಾಲೀಕರ ಮಗಳನ್ನು ವಿಚಾರಿಸಲಾಯಿತು. ಆಕೆಯೇ ಆರೋಪಿ ಹೆಸರು ಹೇಳಿದ್ದಳು’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.