ADVERTISEMENT

ಯುವಜನರ ಸಾವಿನ ಸಂಖ್ಯೆ ಏರಿಕೆ: ದಿನೇಶ್‌ ಗುಂಡೂರಾವ್‌ ಕಳವಳ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 0:47 IST
Last Updated 11 ಜುಲೈ 2025, 0:47 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ಬೆಂಗಳೂರು: ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಅಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯುವಜನರ ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು.

ಜನಪ್ರಕಾಶನ ಗುರುವಾರ ಆಯೋಜಿಸಿದ್ದ ಲೇಖಕಿ ಡಾ.ವಸುಂಧರಾ ಭೂಪತಿ ಅವರ ‘ಮಹಾತ್ಮಗಾಂಧಿ ಮತ್ತು ಪ್ರಕೃತಿ ಚಿಕಿತ್ಸೆ’ ಹಾಗೂ ‘ಹಣ್ಣುಗಳು ಮತ್ತು ಆರೋಗ್ಯ’, ಜಿ.ಶರಣಪ್ಪ ಅವರ ‘ಚಂದ್ರನ ಬೆಳಕಲ್ಲಿ’ ಸಣ್ಣ ಕಥೆಗಳ ಸಂಕಲನ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರೋಗ್ಯ ಹದಗೆಟ್ಟ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಸ್ವಾತಂತ್ರ‍್ಯ ಪೂರ್ವದಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಾಗಿತ್ತು. ಆಗ ಜನರ ಜೀವಿತಾವಧಿ 30ರಿಂದ 35 ವರ್ಷ ಇತ್ತು. ಮಲೇರಿಯಾ, ಪ್ಲೇಗ್ ಮುಂತಾದ ಸಾಂಕ್ರಾಮಿಗಳ ರೋಗಗಳಿಂದ ಕಡಿಮೆ ವಯಸ್ಸಿನಲ್ಲೇ ಮರಣ ಉಂಟಾಗುತ್ತಿತ್ತು. ಈಗ ಬಹುತೇಕ ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಸಾಂಕ್ರಾಮಿಕ ರೋಗಗಳು ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದಿವೆ’ ಎಂದು ಹೇಳಿದರು.

ADVERTISEMENT

ಅನುವಂಶೀಯವಾಗಿ ಅಥವಾ ಬದಲಾದ ಜೀವನ ಶೈಲಿಯಿಂದ ಬರುವ ಕಾಯಿಲೆಗಳಿಂದ ಇತ್ತೀಚೆಗೆ ಸಾಯುವವರ ಪ್ರಮಾಣ ಹೆಚ್ಚಾಗಿದೆ. ಹೃದಯಾಘಾತ, ಕ್ಯಾನ್ಸರ್, ಪಾರ್ಶ್ವವಾಯು ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದು ಮಾಹಿತಿ ನೀಡಿದರು.

ಮಧುಮೇಹ, ರಕ್ತದ ಒತ್ತಡ ಯುವಜನರಲ್ಲಿ ಕಾಣಿಸಿಕೊಳ್ಳುತ್ತಿವೆ. ಯಾವ ರಾಜ್ಯಗಳು ಅಭಿವೃದ್ಧಿಯಾಗಿದೆಯೋ ಅಲ್ಲಿ ಆದಾಯ ಹೆಚ್ಚಿರುತ್ತದೆ. ಖರ್ಚು ಮಾಡುವ ಸಾಮರ್ಥ್ಯವೂ ಇರುತ್ತದೆ. ಆಗ ಓಡಾಟ ಕಡಿಮೆಯಾಗಿ ವಾಹನಗಳಲ್ಲಿಯೇ ಸಂಚರಿಸುವುದು ಹೆಚ್ಚಾಗುವುದರಿಂದ ದೇಹಕ್ಕೆ ವ್ಯಾಯಾಮ ಸಿಗುವುದಿಲ್ಲ. ಸಂಸ್ಕರಿಸಿದ ಆಹಾರ ಸೇವನೆ, ಮಾದಕ ವಸ್ತುಗಳ ಸೇವನೆ, ಮಾಲಿನ್ಯ ಪರಿಸರದಲ್ಲಿ ಬದುಕುವುದು ಮುಂತಾದವು ಕೂಡ ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಹೇಳಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕಿ ಎಂ.ಎಸ್. ಆಶಾದೇವಿ, ಬಿ.ಕೃಷ್ಣಪ್ಪ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ಜನ ಪ್ರಕಾಶನದ ಬಿ. ರಾಜಶೇಖರ ಮೂರ್ತಿ, ಲೇಖಕರಾದ ಡಾ.ವಸುಂಧರಾ ಭೂಪತಿ, ಬಿ.ಶರಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.