ADVERTISEMENT

'ಯೂಟ್ಯೂಬ್’ ನೋಡಿ ಕಳವು; ವ್ಯಾಪಾರಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:31 IST
Last Updated 21 ಅಕ್ಟೋಬರ್ 2021, 19:31 IST
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ   

ಬೆಂಗಳೂರು: ಇಂದಿರಾನಗರದ ಸಿ.ಎಂ.ಎಚ್‌ ರಸ್ತೆಯಲ್ಲಿರುವ ಮೀನಾ ಆಭರಣ ಮಳಿಗೆಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಹೋಟೆಲ್‌ ವ್ಯಾಪಾರಿಗಳಾದ ಮಹೇಂದ್ರ, ನೀಲಕಂಠ ಹಾಗೂ ಸ್ಯಾಮ್ಸನ್ ಬಂಧಿತರು. ಅವರಿಂದ ₹ 60 ಲಕ್ಷ ಮೌಲ್ಯದ 1 ಕೆ.ಜಿ 315 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತ ಆರೋಪಿಗಳು, ಇಂದಿರಾನಗರ ಹಾಗೂ ಬೊಮ್ಮನಹಳ್ಳಿಯಲ್ಲಿ ಪ್ರತ್ಯೇಕವಾಗಿ ಹೋಟೆಲ್ ನಡೆಸುತ್ತಿದ್ದರು. ಕೋವಿಡ್‌ಗೂ ಮುನ್ನ ಹೋಟೆಲ್ ವ್ಯಾಪಾರ ಚೆನ್ನಾಗಿತ್ತು. ಕೋವಿಡ್‌ ನಂತರ ವ್ಯಾಪಾರವೇ ಇರಲಿಲ್ಲ. ನಷ್ಟ ಅನುಭವಿಸಿದ್ದ ಆರೋಪಿಗಳು, ಆರ್ಥಿಕವಾಗಿ ಕುಗ್ಗಿದ್ದರು. ಆರಂಭದಲ್ಲಿ ಮೊಬೈಲ್ ಆ್ಯಪ್‌ಗಳ ಮೂಲಕ ಸಾಲ ಪಡೆದಿದ್ದ ಅವರು, ಸಾಲದ ಕಂತು ಪಾವತಿಸಲು ಸಾಧ್ಯವಾಗದೇ ಮತ್ತಷ್ಟು ತೊಂದರೆಗೆ ಸಿಲುಕಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಸಾಲ ತೀರಿಸಿ ಆರ್ಥಿಕವಾಗಿ ಸುಧಾರಣೆಯಾಗಲು ಯೋಚಿಸಿದ್ದ ಆರೋಪಿಗಳು, ಕಳ್ಳತನಕ್ಕೆ ಸಂಚು ರೂಪಿಸಿದ್ದರು. ‘ಆಭರಣ ಮಳಿಗೆ ಕಳ್ಳತನ ಮಾಡುವುದು ಹೇಗೆ?’ ಎಂಬುದನ್ನು ‘ಯೂಟ್ಯೂಬ್‌’ ಜಾಲತಾಣದಲ್ಲಿ ವಿಡಿಯೊ ನೋಡಿ ಕಲಿತಿದ್ದರು.’

‘ಕೃತ್ಯಕ್ಕೆಂದೇ ಕಾರೊಂದನ್ನು ಬಾಡಿಗೆ ಪಡೆದಿದ್ದ ಆರೋಪಿಗಳು, ಅದರ ನೋಂದಣಿ ಸಂಖ್ಯೆ ಫಲಕಕ್ಕೆ ಮಸಿ ಬಳಿದಿದ್ದರು. ಅ. 14ರಂದು ಆಭರಣ ಮಳಿಗೆಗೆ ನುಗ್ಗಿ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿದ್ದರು’ ಎಂದೂ ಪೊಲೀಸರು ಹೇಳಿದರು.

ಗೋವಾಕ್ಕೆ ಹೋಗಿ ವಾಪಸು: ‘ಚಿನ್ನಾಭರಣ ಸಮೇತ ಆರೋಪಿಗಳು ಗೋವಾಕ್ಕೆ ಹೋಗಿದ್ದರು. ಆದರೆ, ಅಲ್ಲಿ ಚಿನ್ನಾಭರಣ ಮಾರಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಬೆಂಗಳೂರಿನತ್ತ ವಾಪಸು ಬರುತ್ತಿದ್ದರು. ಅದೇ ಸಂದರ್ಭದಲ್ಲೇ ತುಮಕೂರು ಬಳಿ ಮೂವರನ್ನು ಬಂಧಿಸಲಾಯಿತು’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.