ವೈ.ಎಸ್.ವಿ.ದತ್ತ ಅವರಿಗೆ ಜಯಪ್ರಕಾಶ್ ನಾರಾಯಣ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಟಿ.ಎನ್. ಸೀತಾರಾಮ್, ಬರಗೂರು ರಾಮಚಂದ್ರಪ್ಪ, ಬಿ.ಎಲ್. ಶಂಕರ್, ಮೊಹನ್ ಕೊಂಡಜ್ಜಿ, ಆರ್. ದಯಾನಂದ ಕೋಲಾರ ಮತ್ತು ಬಿ.ಆರ್. ಪಾಟೀಲ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಕೇವಲ ಗಣಿತ ಮೇಷ್ಟ್ರು ಅಲ್ಲ, ರಾಜಕೀಯದ ಮೇಷ್ಟ್ರು ಸಹ ಹೌದು. ರಾಜಕಾರಣದಲ್ಲಿ ಶುದ್ಧ, ಸರಳ ಹಾಗೂ ನಿಷ್ಠುರವಾಗಿ ಇರಬೇಕು ಎನ್ನುವುದಕ್ಕೆ ದತ್ತ ಒಂದು ರೂಪಕ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಭಾರತ ಯಾತ್ರಾ ಕೇಂದ್ರ ಹಾಗೂ ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಶನಿವಾರ ಆಯೋಜಿಸಿದ್ದ ‘ಜಯಪ್ರಕಾಶ್ ನಾರಾಯಣ್–124’ ಕಾರ್ಯಕ್ರಮದಲ್ಲಿ ವೈ.ಎಸ್.ವಿ.ದತ್ತ ಅವರಿಗೆ ಜೆ.ಪಿ.ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬರಗೂರು ರಾಮಚಂದ್ರಪ್ಪ, ‘ಮೇಷ್ಟ್ರು ಮೇಲೆ ಇರುವ ಪ್ರೀತಿ ಪ್ರಾಧ್ಯಾಪಕರ ಮೇಲೆ ಇರುವುದಿಲ್ಲ. ನಿಜವಾದ ಮೇಷ್ಟ್ರುಗಳು ಸಮಾಜ, ಮನಸ್ಸು ಹಾಗೂ ಕನಸು ಕಟ್ಟುವ ಕೆಲಸ ಮಾಡುತ್ತಾರೆ. ಸಮಾಜಕ್ಕೆ ಉಪಯೋಗ ಆಗುವುದನ್ನು ಹೇಳುತ್ತಾರೆ. ಹಾಗಾಗಿ ದತ್ತ ಅವರು ಎಲ್ಲಿಯೇ ಹೋದರು ನಮಗೆ ಮೇಷ್ಟ್ರೇ. ಕೇವಲ ಪ್ರಶಸ್ತಿ ಬಂದಿದೆ ಎಂಬ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಅವರನ್ನು ಹತ್ತಿರದಿಂದ ನೋಡಿದ್ದೇನೆ. ರಾಜಾಜಿನಗರದಲ್ಲಿರುವ ರಾಮಮಂದಿರಕ್ಕೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಪರ್ಶ ನೀಡಿದರು’ ಎಂದು ನುಡಿದರು.
‘ದತ್ತ ನಮಗೆ ದೊಡ್ಡ ರಾಜಕಾರಣಿಗಳ ಪರಿಚಯವನ್ನು ಮಾಡಿಕೊಟ್ಟರು. ಅವರು ಅಧ್ಯಯನಶೀಲರು, ಅದೇ ಕಾರಣಕ್ಕೆ ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಿದ್ದಾರೆ. ಸರಳ ಮತ್ತು ಸಜ್ಜನಿಕೆಗೆ ಹೆಸರುವಾಸಿ’ ಎಂದು ತಿಳಿಸಿದರು.
‘ದೇಶದ ರಾಜಕಾರಣದಲ್ಲಿ ಜಯಪ್ರಕಾಶ್ ನಾರಾಯಣ ಅವರ ವ್ಯಕ್ತಿತ್ವ, ಸಾಧನೆ, ಹೋರಾಟ ಮರೆಯುವಂತಿಲ್ಲ. ಅವರು ಚಲನಶೀಲ ಚಿಂತಕರಾಗಿದ್ದರು. ದೇಶದಲ್ಲಿ ಕೆಟ್ಟ ವ್ಯವಸ್ಥೆ ಬದಲಾಗಬೇಕು ಎನ್ನುವುದು ಅವರ ಆಶಯವಾಗಿತ್ತು. ದಲಿತರು, ತಳ ಸಮುದಾಯ, ರೈತರ ಬಗ್ಗೆ ಕಾಳಜಿ ಹೊಂದಿದ್ದರು’ ಎಂದರು.
ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ‘ನಾನು, ಬಿ.ಎಲ್.ಶಂಕರ್, ಮೋಹನ್ ಕೊಂಡಜ್ಜಿ ಅವರು ಚಳವಳಿಯ ಕೊನೆಯ ಕೊಂಡಿಗಳು. ಇಂದು ಕತ್ತಲೆಯಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ ಚಳವಳಿ ಕಟ್ಟುವ ಕೆಲಸವನ್ನು ದತ್ತ ಮಾಡಬೇಕು’ ಎಂದು ಸಲಹೆ ನೀಡಿದರು.
ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಮ್, ‘ಕಡೂರು ಕ್ಷೇತ್ರದಿಂದ ದತ್ತ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಜನರೇ ಅವರಿಗೆ ದೇಣಿಗೆ ನೀಡಿ, ಗೆಲ್ಲಿಸಿದರು. ಹಣ, ತೋಳ್ಬಲ ವಿರುದ್ಧ ಹೋರಾಡಿ, ಗೆಲುವು ಸಾಧಿಸಿದರು’ ಎಂದರು.
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ವೈ.ಎಸ್.ವಿ.ದತ್ತ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಮಾತನಾಡಿದರು. ಭಾರತ ಯಾತ್ರಾ ಕೇಂದ್ರದ ಪ್ರದಾನ ಕಾರ್ಯದರ್ಶಿ ಕೆ.ವಿ.ನಾಗರಾಜಮೂರ್ತಿ, ಲೋಕನಾಯಕ ಜೆ.ಪಿ.ವಿಚಾರ ವೇದಿಕೆ ಅಧ್ಯಕ್ಷ ಆರ್.ದಯಾನಂದ್ ಕೋಲಾರ, ಸಂಯೋಜಕರಾದ ಕೆ.ಎಸ್.ನಾಗರಾಜ್, ಪಿ.ವಿಜಯ್ ಕುಮಾರ್ ಆಲಿಬಾಬ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.