ADVERTISEMENT

'ಸೀಲ್ಡ್' ಆದೇಶಕ್ಕೆ ಜಮೀರ್ ಅಹಮದ್ ಬೆಂಬಲ: ಧಾರ್ಮಿಕ ಮುಖಂಡರೊಂದಿಗೆ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಏಪ್ರಿಲ್ 2020, 10:03 IST
Last Updated 10 ಏಪ್ರಿಲ್ 2020, 10:03 IST
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್
ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್   

ಬೆಂಗಳೂರು: 'ನನ್ನ ಕ್ಷೇತ್ರದ ಎರಡು ವಾರ್ಡ್‌ಗಳನ್ನು ಸೀಲ್ ಮಾಡಲು ಬಿಬಿಎಂಪಿ ನಿರ್ಧರಿಸುವುದನ್ನು ನಾನು ಸ್ವಾಗತಿಸುತ್ತೇನೆ. ಕೊರೊನಾ ಸೋಂಕು ಹರಡುವುದು ತಡೆಯಲು ಇದು ಅನಿವಾರ್ಯವಾಗಿತ್ತು' ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು.

'ಈ ಪ್ರದೇಶದ ಮೂವರು ದೆಹಲಿಯ ನಿಜಾಮುದ್ದೀನ್ ದರ್ಗಾ ಮತ್ತು ರಾಜಸ್ಥಾನದ ಅಜ್ಮೇರ್ ದರ್ಗಾಕ್ಕೆ ಭೇಟಿ ನೀಡಿದ್ದರು. ತಾವಾಗಿಯೇ ಬಂದು ತಪಾಸಣೆಗೆ ಒಳಪಟ್ಟರು. ಪ್ರಯೋಗಾಲಯದ ಪರೀಕ್ಷಾ ವರದಿಯಲ್ಲಿ ಇವರಲ್ಲಿ ಸೋಂಕು ದೃಢಪಟ್ಟಿತ್ತು' ಎಂದು ಜಮೀರ್ ಮಾಹಿತಿ ನೀಡಿದರು.

'ಬಿಬಿಎಂಪಿ ಅಧಿಕಾರಿಗಳೊಂದಿಗೆ ಇಂದು ಸಂಜೆ ಮತ್ತೊಂದು ಸಭೆ ನಿಗದಿಯಾಗಿದೆ. ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸುವ ಬಗ್ಗೆ ಆ ಸಭೆಯಲ್ಲಿ ಚರ್ಚಿಸುತ್ತೇನೆ. ಈ ಪ್ರದೇಶದ ಧಾರ್ಮಿಕ ಮುಖಂಡರೊಂದಿಗೆ ಮಾತನಾಡಿದ್ದೇನೆ. ಸೀಲ್‌ಡೌನ್‌ನ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟು, ಸಹಕಾರ ಕೋರಿದ್ದೇನೆ' ಎಂದರು.

ADVERTISEMENT

'ಕೋವಿಡ್-19 ದೃಢಪಟ್ಟವರನ್ನು ಈಗಾಗಲೇ ನಿಗದಿತ ಆಸ್ಪತ್ರೆಗೆ ಕಳಿಸಿ, ಚಿಕಿತ್ಸೆಗೆ ಕ್ರಮವಹಿಸಲಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅಕ್ಕಪಕ್ಕದ ಮನೆಗಳವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಪ್ರದೇಶದಲ್ಲಿರುವ ಇತರೆಲ್ಲರ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತದೆ' ಎಂದು ಜಮೀರ್ ಹೇಳಿದರು.

ಈ ಪ್ರದೇಶದಲ್ಲಿ ಮನೆಮನೆ ಸಮೀಕ್ಷೆ ನಡೆಸಲು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ 160 ಮಂದಿಯ ತಂಡಗಳನ್ನು ರಚಿಸಲಾಗಿದೆ. ಎರಡೂ ವಾರ್ಡ್‌ಗಳಲ್ಲಿ ಸುಮಾರು 2 ಲಕ್ಷ ಜನಸಂಖ್ಯೆ ಇದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ಮಾಹಿತಿ ನೀಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.