ಬಸವಕಲ್ಯಾಣ: ಇಲ್ಲಿನ ತ್ರಿಪುರಾಂತ ಕೆರೆ ಹತ್ತಿರದ ನಾಲೆಗೆ ಎತ್ತರದಲ್ಲೊಂದು ಕೆಳಗೊಂದು ಸೇತುವೆ ನಿರ್ಮಿಸಲಾಗಿದೆ. ನೋಡಲು ಮಹಾನಗರದ ಓವರಬ್ರಿಡ್ಜನಂತೆ ಅಂಕುಡೊಂಕಾಗಿದ್ದು ಚೆಂದಾಗಿ ಕಾಣುತ್ತದೆ. ಆದರೆ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.ಇಲ್ಲಿರುವ ಮೊದಲಿನ ಸೇತುವೆ ಹಳೆಯದಾಗಿದ್ದರಿಂದ 2 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ. ಆದರೆ ಈ ಸೇತುವೆ ಬಹಳಷ್ಟು ಎತ್ತರದಲ್ಲಿ ಇರುವುದರಿಂದ ಸಮಸ್ಯೆಯಾಗಿದೆ. ಸೇತುವೆಯ ಎರಡೂ ಕಡೆಯಲ್ಲಿನ ರಸ್ತೆಯೂ ಎತ್ತರಗೊಂಡಿದ್ದರಿಂದ ಎದುರಿಗೆ ವಾಹನಗಳು ಬಂದರೆ ಹೋಗಲು ಜಾಗ ಇಲ್ಲದಂತಾಗುತ್ತಿದೆ. ಚಾಲಕನ ಎಚ್ಚರತಪ್ಪಿದರೆ ವಾಹನಗಳು ಕೆಳಗೆ ಉರುಳುತ್ತಿವೆ.
ಈ ಕಾರಣ ಸೇತುವೆಯ ಎರಡೂ ಕಡೆಯಲ್ಲಿನ ರಸ್ತೆ ಅಗಲಗೊಳಿಸಬೇಕು ಎಂದು ಕೆಲವರು ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಹಳೆಯ ಸೇತುವೆಯ ಸ್ಥಳದಲ್ಲಿ ಹೊಸ ಸೇತುವೆಯಂತೆ ಎತ್ತರದಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಸಂಬಂಧಿತರು ಭರವಸೆ ಕೊಟ್ಟಿದ್ದರು. ಆದರೆ 8 ವರ್ಷಗಳಾದರೂ ಆ ಕೆಲಸ ಆಗಿಲ್ಲ.
ವಿಪರ್ಯಾಸವೆಂದರೆ ಈಚೆಗೆ ಇಲ್ಲಿನ ರಸ್ತೆ ಸುಧಾರಣೆಗೆ ಹಣ ಮಂಜೂರಾದರೂ ಹಳೆಯ ಸೇತುವೆಯನ್ನು ಎತ್ತರಿಸದೆ ಹಾಗೆಯೇ ಕಾಮಗಾರಿ ನಡೆಸಲಾಗಿದೆ. ಇದಲ್ಲದೆ ಎತ್ತರದ ರಸ್ತೆಯ ಬದಿಯಲ್ಲಿ ತಡೆಗೋಡೆ ಸಹ ನಿರ್ಮಾಣ ಮಾಡಲಾಗಿಲ್ಲ. ಈ ಕಾರಣ ಕಳೆದ ಎರಡು ತಿಂಗಳಲ್ಲಿ ಬಸ್ ಮತ್ತು ಲಾರಿ ಒಳಗೊಂಡು ಮೂರು ವಾಹನಗಳು ಉರುಳಿ ಬಿದ್ದು ಜನರಿಗೆ ಗಾಯಗಳಾಗಿವೆ. ಆದ್ದರಿಂದ ಶೀಘ್ರವೇ ಇಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು. ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.