ADVERTISEMENT

ಅಭಿವೃದ್ಧಿಗೆ ಶಕ್ತಿಮೀರಿ ಸಹಕಾರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 5:15 IST
Last Updated 5 ನವೆಂಬರ್ 2012, 5:15 IST

ಹುಮನಾಬಾದ್: ಆಹಾರ ಉತ್ಪಾದನಾ ಘಟಕ ಅಭಿವೃದ್ಧಿಗಾಗಿ ಶಕ್ತಿಮೀರಿ ಸಹಕರಿಸುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಸ್ಸೀಮುದ್ದೀನ್ ಪಟೇಲ ವಿಶ್ವಾಸ ವ್ಯಕ್ತಪಡಿಸಿದರು. ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಬೀದರ್ ಅಡಿಯಲ್ಲಿ ಆರಂಭಿಸಲಾದ ಸ್ಪೂರ್ತಿ ಸ್ವಸಹಾಯ ಆಹಾರ ಉತ್ಪಾದನಾ ಘಟನದಲ್ಲಿ ಭಾನುವಾರ ನಡೆದ ಆಹಾರ ಪೊಟ್ಟಣ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಕಲಾಂಗರನ್ನು ನೋಡಿ ಹೆಚ್ಚಿನ ಜನ ಅಯ್ಯ್‌ಪಾಪ್ ಎಂಬ ಅನುಕಂಪದ ಮಾತನಾಡಿ, ಮುಂದೆ ಹೋಗಿದ್ದು ಬಿಟ್ಟರೇ ಅಗತ್ಯ ಸಹಕಾರ ನೀಡಿ, ಪ್ರೆೋತ್ಸಾಹಿಸುವ ಪ್ರಾಮಾಣಿಕ ಪ್ರಯತ್ನ ನಡೆಯದಿರುವುದು ನೋವಿನ ಸಂಗತಿ ಎಂದು ತಿಳಿಸಿದರು. ಘಟಕದಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡ ಜಿಲ್ಲೆಯ 56ಜನ ಯುವಕ- ಯುವತಿಯರಿಗೆ ಪ್ರತಿನಿತ್ಯ ಹೋಗಿ ಬರುವುದಕ್ಕೆ ಬಸ್‌ಪಾಸ್ ಕೊಡಿಸುವುದಾಗಿ ಪ್ರಕಟಿಸಿದರು.

ಅಕ್ಟೋಬರ್ 16ಕ್ಕೆ ಅಸ್ತಿತ್ವಕ್ಕೆ ಬಂದ ಸಂಸ್ಥೆಯಲ್ಲಿ ಕೇವಲ ಎರಡೇ ವಾರದಲ್ಲಿ ಆಹಾರ ಉತ್ಪಾದನೆ ಕಾರ್ಯ  ಆರಂಭಿಸಿದ್ದು ಸಾಮಾನ್ಯ ವಿಷಯವಲ್ಲ ಎಂದ ತಿಳಿಸಿದ ಅವರು, ಇಲ್ಲಿನ ಉತ್ಪನ್ನಗಳನ್ನು ಖರೀದಿಸಲು ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಭರವಸೆ ನೀಡುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿದರು.

ಪ್ರಾಸ್ತಾವಿಕ ಮಾತನಾಡಿದ ಆಡಳಿತ ಅಧಿಕಾರಿ ಶ್ರೀನಿವಾಸ ಕಟ್ಟಿಮನಿ ಘಟಕದಲ್ಲಿ ಸದ್ಯ ಆಲೂಚಿಪ್ಸ್, ಮಸಾಲೆ ಸೇಂಗಾ, ಮೂಂಗದಾಲ್, ಪಾಪಡ ಮೊದಲಾದ 7ಬಗೆ ತಿನಿಸುಗಳನ್ನು ಖುದ್ದು ವಿಕಲಾಂಗರೇ ಸಿದ್ಧಪಡಿಸುತ್ತಿದ್ದಾರೆ ಸಗಟು ಖರೀದಿದಾರರಿಗೆ ಅನ್ಯ ಕಂಪೆನಿಗಿಂದ ಕಡಿಮೆ ದರದಲ್ಲಿ ಸಾಗಿಸುವುದರ ಜೊತೆಗೆ ಹೆಚ್ಚಿನ ಲಾಭ ನೀಡುವ ಉದ್ದೇಶ ಸಂಸ್ಥೆ ಮುಂದಿದೆ.

ಆದರೇ ಸ್ಪರ್ಧಾತ್ಮಕ ಯುಗವಾದ ಇಂದು ಸೀಮಿತ ಹಣದಲ್ಲಿ ಉದ್ಯೋಗ ನಡೆಸುವುದು ಕಷ್ಟಸಾಧ್ಯವಾದ ಕಾರಣ ಉನ್ನತ ಅಧಿಕಾರಿಗಳು ವಿಶೇಷವಾಗಿ ಚುನಾಯಿತ ಪ್ರತಿನಿಧಿಗಳು ಅಗತ್ಯ ನೆರವು ನೀಡಿ, ಪ್ರೋತ್ಸಾಹಿಸಿದಲ್ಲಿ ಹೆಚ್ಚಿನ ಸಾಧನೆ ಗೈಯ್ಯಲು ಸಾಧ್ಯವಾಗುತ್ತದೆ ಎಂದರು. 

ಬೀದರ್ ತಾಲ್ಲೂಕಿನ ಕಮಠಾಣಾ, ಹುಮನಾಬಾದ್ ತಾಲ್ಲೂಕು ಜಲಸಂಗವಿ ಗ್ರಾಮದಿಂದ ತಲಾ 12ಜನರು ಸೇರಿ ಜಿಲ್ಲೆಯ ಒಟ್ಟು 56ಉದ್ಯೋಗಿಗಳು ಇಲ್ಲಿಗೆ ಬರುತ್ತಾರೆ ಎಂದು ವಿವರಿಸಿದರು. ಅಶ್ವಿನಿ, ಸೆಹನಾಜ ಬೇಗಂ, ಸೈಯದ್ ಮೆಹಮೂದ್, ರೇಷ್ಮಾ  ಅನುಭವ ಹಂಚಿಕೊಂಡರು. ಬಾಡಿಗೆ ಇಲ್ಲದೆ ಕಟ್ಟಡ ನೀಡಿದ ಮಲ್ಲಪ್ಪ ಕಟ್ಟಿಮನಿ ಅವರನ್ನು ನಸ್ಸೀಮುದ್ದೀನ್ ಪಟೇಲ ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT