ADVERTISEMENT

ಆಕಾಶದಲ್ಲಿ ಚಿತ್ತಾರ ಬಿಡಿಸಿದ ವಿಶಿಷ್ಟ ಪಟಗಳು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 8:15 IST
Last Updated 19 ಫೆಬ್ರುವರಿ 2011, 8:15 IST

ಬೀದರ್: ಒಂದೇ ದಾರಕ್ಕೆ 250 ಪತಂಗಗಳನ್ನು ಹಾರಿಸುವ ಮೂಲಕ ಬೀದರ್ ಉತ್ಸವ ನಿಮಿತ್ತ ನಗರದ ಐತಿಹಾಸಿಕ ಕೋಟೆಯಲ್ಲಿ ಆಯೋಜಿಸಿರುವ ಪತಂಗ ಉತ್ಸವದಲ್ಲಿ ಹೈದರಾಬಾದ್ ಕೋಹಿನೂರ ಕೈಟ್ ಕ್ಲಬ್‌ನ ಶ್ರೀನಿವಾಸ ಎಲ್ಲರು ನಿಬ್ಬೆರಗಾಗುವಂತೆ ಮಾಡಿದರು. ಒಂದೇ ದಾರಕ್ಕೆ ಜೋಡಿಸಿದ ಪತಂಗಳನ್ನು ಒಂದರ ಹಿಂದೆ ಒಂದರಂತೆ ಬಿಟ್ಟು ಆಕಾಶ ಪಟಗಳ ಚಿತ್ತಾರ ಬಿಡಿಸಿದರು. ತಮ್ಮ ವಿಶೇಷ ಕೌಶಲ್ಯದಿಂದ ದೃಷ್ಟಿ ಹಾಯಿಸಿದುದ್ದಕ್ಕೂ ಪಟಗಳ ಸರಪಳಿ ಸೃಷ್ಟಿಸಿದರು.

ಮುಂಬೈನ್ ಸೃಷ್ಟಿ ಕೈಟ್ ಕ್ಲಬ್‌ನ ಅಶೋಕ ಷಾಹ ಹುಲಿ ಮತ್ತು ಬಾವಲಿ ಆಕಾರದ ಪತಂಗಳನ್ನು ಆಕಾಶದಲ್ಲಿ ಹಾರಿಸಿ ಗಮನ ಸೆಳೆದರು. ಉತ್ತರ ಪ್ರದೇಶದ ಲಕ್ನೋ ಕೈಟ್ ಆರ್ಗನೈಝೇಷನ್‌ನ ಮನೀಷ ಶ್ರೀವಾಸ್ತವ್ ತಾವೇ ಸಿದ್ಧಪಡಿಸಿದ್ದ ವಿಶೇಷ ಹಾಗೂ ಅಪರೂಪದ ಪಟಗಳನ್ನು ಹಾರಿಸಿದರು. ಗುಜರಾತ್‌ನ ವಡೋದರಾದ ದಿಗಂತ ಜೋಶಿ ಹಾಗೂ ತಂಡದವರು ಬೇರೆ ಬೇರೆ ಆಕಾರದ ಪತಂಗಳನ್ನು ಹಾರಿಸಿ ಮನೋರಂಜನೆ ಒದಗಿಸಿದರು. ದೇವಿ ಮುಖದ ಪತಂಗ ವಿಶೇಷವಾಗಿ ಎಲ್ಲರ ಚಿತ್ತ ತನ್ನತ್ತ ಆಕರ್ಷಿಸಿತು.

ಉತ್ಸವದ ಮೊದಲ ದಿನದ ಪತಂಗ ಉತ್ಸವದಲ್ಲಿ ಪೇಂಚ್ ಸ್ಪರ್ಧೆ ನಡೆಯಿತು. ಸ್ಥಳೀಯ ಸ್ಪರ್ಧಾಳುಗಳ ಜೊತೆಗೆ ಹೊರಗಿನಿಂದ ಬಂದ ಸ್ಪರ್ಧಾಳುಗಳು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿದರು. ಎದುರಾಳಿಗಳ ಪಟಕ್ಕೆ ಪೇಂಚ್ ಹಾಕುವ ಮೂಲಕ ಎಲ್ಲರನ್ನು ರಂಜಿಸಿದರು. ಅಲ್ಲದೇ ವಿವಿಧ ತಂತ್ರಗಳನ್ನು ಬಳಸಿ ಎದುರಾಳಿಗಳ ಪತಂಗಳನ್ನು ಕಟ್ ಮಾಡುವ ಮತ್ತು ತಮ್ಮ ಪತಂಗಗಳನ್ನು ಸಂಕಟದಿಂದ ಪಾರು ಮಾಡಿಕೊಳ್ಳುವ ಮೂಲಕ ತಂತ್ರಗಾರಿಕೆ ಮೆರೆದರು.

ಇದಕ್ಕೂ ಮುನ್ನ ಶಾಸಕ ಬಂಡೆಪ್ಪ ಕಾಶೆಂಪೂರ್ ಹಾಗೂ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಪತಂಗ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಇಬ್ಬರೂ ಪತಂಗಗಳನ್ನು ಕೂಡ ಹಾರಿಸಿದರು. ಪತಂಗ ಉತ್ಸವ ಸಮಿತಿಯ ಅಧ್ಯಕ್ಷ ಡಾ. ರಾಜಶೇಖರ ಕೌಜಲಗಿ, ಪ್ರಮುಖರಾದ ಡಾ. ಮಕ್ಸೂದ್ ಚಂದಾ, ರಮೇಶ ಪಾಟೀಲ್ ಸೋಲಪುರ, ರವಿ ಮೂಲಗೆ, ನಬಿ ಖುರೈಶಿ, ಸೌದ ಖಾದ್ರಿ ಮತ್ತಿತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.