ADVERTISEMENT

ಆರಂಭವಾಗದ ಇಂದಿರಾ ಕ್ಯಾಂಟೀನ್

ಹಿಂದುಳಿದ ತಾಲ್ಲೂಕಿನತ್ತ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 8:45 IST
Last Updated 11 ಜೂನ್ 2018, 8:45 IST

ಔರಾದ್: ಜನರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಭಾಗ್ಯ ತಾಲ್ಲೂಕಿನ ಜನರಿಗೆ ಲಭಿಸಿಲ್ಲ.

ಬೀದರ್-ಭಾಲ್ಕಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಜನರಿಗೆ ಇಂದಿರಾ ಕ್ಯಾಂಟೀನ್ ಊಟ ಮತ್ತು ಉಪಹಾರ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಔರಾದ್ ತಾಲ್ಲೂಕಿನಲ್ಲಿ ಈ ಸೌಲಭ್ಯ ಕಲ್ಪಿಸಲು ಸರ್ಕಾರ ವಿಳಂಬ ಮಾಡುತ್ತಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

'ಔರಾದ್‌ ಹಿಂದುಳಿದ ತಾಲ್ಲೂಕು ಆಗಿದ್ದು, ಇಲ್ಲಿ ಬಡವರು ಮತ್ತು ಕೂಲಿಕಾರ್ಮಿಕರು ಹೆಚ್ಚಿದ್ದಾರೆ. ಸೋಮವಾರದ ಸಂತೆ ದಿನ ತಾಲ್ಲೂಕಿನ ವಿವಿಧ ಊರುಗಳಿಂದ ಪಟ್ಟಣಕ್ಕೆ ಸಾಕಷ್ಟು ಸಂಖ್ಯೆ ಜನ ಬರುತ್ತಾರೆ. ಕೆಲವರಿಗೆ ದುಬಾರಿ ಹಣ ಕೊಟ್ಟು ಹೋಟೆಲ್‌ನಲ್ಲಿ ಊಟ ಮಾಡಲು ಆಗುವುದಿಲ್ಲ. ಈ ಕಾರಣ ವೃದ್ಧರು ಮತ್ತು ಅನಾಥರು ಅಮರೇಶ್ವರ ದೇವಸ್ಥಾನದ ದಾಸೋಹದಲ್ಲಿ ಊಟ ಮಾಡುತ್ತಾರೆ. ಸರ್ಕಾರವು ಇಂದಿರಾ ಕ್ಯಾಂಟಿನ್ ಆರಂಭಿಸಿದರೆ ಎಲ್ಲ ಜನರಿಗೆ ಅನುಕೂಲ ಆಗುತ್ತದೆ. ಆದರೆ ಕ್ಯಾಂಟಿನ್ ಕಟ್ಟಡ ಕೆಲಸ ಮುಗಿದರೂ ಊಟ ಮತ್ತು ಉಪಹಾರ ವ್ಯವಸ್ಥೆ ಮಾಡಲು ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ' ಎಂದು ನಿರುದ್ಯೋಗಿ ಪದವೀಧರ ಸಂಘದ ಅಧ್ಯಕ್ಷ ಸಂಜುಕುಮಾರ ಮೇತ್ರೆ ತಿಳಿಸಿದರು.

ADVERTISEMENT

'ಚುನಾವಣೆಗೆ ಮುನ್ನ ಕ್ಯಾಂಟೀನ್ ಕೆಲಸ ಬಹತೇಕ ಪೂರ್ಣಗೊಂಡಿದೆ. ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಕಾರಣ ವಿಳಂಬವಾಗಿದೆ. ಈಗ ಚುನಾವಣೆ ಪ್ರಕ್ರಿಯೆ ಮುಗಿದಿರುವುದರಿಂದ ಕ್ಯಾಂಟೀನ್ ಆರಂಭಿಸಲು ಸಂಬಂಧಪಟ್ಟವರ  ಗಮನಕ್ಕೆ ತರಲಾಗುವುದು' ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಿಳಿಸಿದ್ದಾರೆ.

ತಾಲ್ಲೂಕಿಗೆ ಮೊದಲಿನಿಂದಲೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತಾರತಮ್ಯ ಮಾಡಲಾಗಿದೆ. ಇಂದಿರಾ ಕ್ಯಾಂಟೀನ್ ಆರಂಭಿಸುವಲ್ಲಿಯೂ ಸಹ ಅದನ್ನೇ ಮಾಡಲಾಗುತ್ತಿದೆ
– ಪ್ರಭು ಚವಾಣ್, ಶಾಸಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.