ADVERTISEMENT

ಈ ರಸ್ತೆ ‘ಆಯಸ್ಸು’ ಎರಡೂವರೆ ತಿಂಗಳು!

ಉ.ಮ.ಮಹೇಶ್
Published 12 ಮೇ 2014, 5:25 IST
Last Updated 12 ಮೇ 2014, 5:25 IST
ಬೀದರ್‌ ನಗರದಲ್ಲಿ ಮಡಿವಾಳ ವೃತ್ತದಿಂದ ಕೋಟೆಗೆ ತೆರಳುವ ಜನವಾಡ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ
ಬೀದರ್‌ ನಗರದಲ್ಲಿ ಮಡಿವಾಳ ವೃತ್ತದಿಂದ ಕೋಟೆಗೆ ತೆರಳುವ ಜನವಾಡ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ   

ಬೀದರ್: ರಸ್ತೆಯಲ್ಲಿದ್ದ ಹಳ್ಳ, ತಗ್ಗುಗಳನ್ನು ಮುಚ್ಚಿದ ಸಮಾಧಾನ ವಾಹನ ಚಾಲಕರಲ್ಲಿ ನೆಲೆಗೊಳ್ಳುವ ಮುನ್ನವೇ ಮತ್ತೆ ಯಥಾಸ್ಥಿತಿಗೆ ಮರಳಿರುವ ರಸ್ತೆಯ ಸದ್ಯದ ಸ್ಥಿತಿಯು ವಾಹನ ಚಾಲಕರ ಪಾಲಿಗೆ ಆತಂಕ ಮೂಡಿಸಿದೆ. ಹಗಲಲ್ಲೂ ಕಸರತ್ತು ಮಾಡಿಸುತ್ತಿದೆ.

ನಗರದ ಹೃದಯ ಭಾಗದಲ್ಲಿಯೇ ಇರುವ, ಹೆಚ್ಚಿನ ವಾಹನ ದಟ್ಟಣೆ ಇರುವ ಪ್ರಮುಖ ಸಂಪರ್ಕ ರಸ್ತೆಯಾದ ಇದು ದುರಸ್ತಿಯಾಗಿ ಎರಡೂವರೆ ತಿಂಗಳು ಕಳೆದಿಲ್ಲ. ಆಗಲೇ ರಸ್ತೆ ಕಾಮಗಾರಿಯ ಗುಣಮಟ್ಟ ಅಕ್ಷರಶಃ ಬೀದಿಗೆ ಬಿದ್ದಿದೆ!
ಇದು ಜಿಲ್ಲಾ ಆಸ್ಪತ್ರೆಗೆ ಹೊಂದಿಕೊಂಡಿರುವ ಮಡಿವಾಳ ವೃತ್ತದಿಂದ ಜನವಾಡ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ. ಫೆಬ್ರುವರಿ ಆರಂಭದಲ್ಲಿ ಕೋಟೆ ಅಂಗಳದಲ್ಲಿ ನಡೆದ ಬೀದರ್‌ ಉತ್ಸವ ಸಂದರ್ಭದಲ್ಲಿ ದುರಸ್ತಿ ಆಗಿತ್ತು.ಡಾಂಬರೀಕರಣ­ಗೊಂಡು ನಳನಳಿಸುತ್ತಿತ್ತು.

ಉತ್ಸವದ ಸಂಭ್ರಮ ಮತ್ತು ಚುನಾವಣೆಯ ಬಿರುಸು ಮುಗಿಯುತ್ತಿದ್ದಂತೆಯೇ ರಸ್ತೆ ಮತ್ತೆ ಯಥಾಸ್ಥಿತಿಗೆ ತಲುಪಿದೆ. ಸುಮಾರು 1–2 ಕಿ.ಮೀ. ಅಂತರದ ಈ ರಸ್ತೆಯ ಎರಡು ಆಯಕಟ್ಟಿನ ಸ್ಥಳಗಳಲ್ಲಿ ಆತಂಕ ಮೂಡಿಸುವಷ್ಟು ದೊಡ್ಡ ಪ್ರಮಾಣದ ಹಳ್ಳ– ದಿಣ್ಣೆಗಳು ಬಿದ್ದಿವೆ.

ಒಂದು ರಸ್ತೆಯ ನಡುವೆ ತಿರುವಿನಲ್ಲಿ ಇದ್ದರೆ, ಇನ್ನೊಂದು ಮಡಿವಾಳ ವೃತ್ತಕ್ಕೆ ಹೊಂದಿಕೊಂಡಿರುವಂತೆಯೇ ಆರಂಭದಲ್ಲಿಯೇ ಇದೆ. ತಿರುವಿನ ಬಳಿ ಈ ಹಳ್ಳ ದಿಗ್ಗುಗಳು ಅರ್ಧ ರಸ್ತೆಯನ್ನೇ ಆಕ್ರಮಿಸಿಕೊಂಡಿದ್ದು, ಸುಮಾರು 8–10 ಅಡಿಗಳಷ್ಟು ಅಗಲವಾಗಿದೆ.

ಅದು ಏಕಮುಖ ರಸ್ತೆಯಾಗಿರುವ ಕಾರಣ, ಅನಿವಾರ್ಯವಾಗಿ ಈ ಅವ್ಯವಸ್ಥೆಯನ್ನೇ ದಾಟಿಯೇ ಹೋಗ­ಬೇಕು. ವೇಗ ನಿಯಂತ್ರಕ ಸೂಚನೆ­ಗಳಾಗಲಿ, ವ್ಯವಸ್ಥೆ­ಯಾಗಲಿ ಇಲ್ಲದಿರುವ ಕಾರಣ ಜನವಾಡ ರಸ್ತೆಯಿಂದ ಬರುವ ಚಾಲಕರು ತಕ್ಷಣಕ್ಕೆ ವಾಹನ ನಿಯಂತ್ರಿಸಲು ಆಗದೇ ಬೀಳುವ ಸ್ಥಿತಿ ಇದೆ.

ಇನ್ನು ಮಡಿವಾಳ ವೃತ್ತದ ಬಳಿಯೂ ಇಂಥದೇ ಸ್ಥಿತಿ. ಹಳ್ಳ–ದಿಣ್ಣೆಗಳ ಪರಿ­ಣಾಮ ವಾಹನಗಳ ವೇಗ ಕಡಿಮೆ­ಯಾಗಿದ್ದು, ಭಾರಿ ವಾಹನ ಪ್ರವೇಶಿ­ಸುವ ಹಂತದಲ್ಲಿ ವೃತ್ತದಲ್ಲಿಯೇ ವಾಹನ ದಟ್ಟಣೆ ಉಂಟಾಗುತ್ತದೆ.

ಬೀದರ್‌ ಉತ್ಸವದ ಸಂದರ್ಭದಲ್ಲಿ ಎರಡು ಬುಲ್ಡೋಜರ್‌ಗಳು ಓಡಾಡಿದುದನ್ನು ಕಂಡಿದ್ದ ಸಾರ್ವ­ಜನಿಕರು ಉತ್ತಮ ರಸ್ತೆಯಾಯಿತು ಎಂದುಕೊಂಡಿದ್ದರು. ಆದರೆ ಆ ಭರವಸೆ ಅಲ್ಪಾವಧಿಯಲ್ಲಿಯೇ ಹಳ್ಳ ಹಿಡಿದಿದೆ.

ಈ ಕುರಿತು ನಗರಸಭೆ ಆಯುಕ್ತ ಜಗದೀಶ್‌ ನಾಯಕ್‌ ಅವರನ್ನು ಸಂಪರ್ಕಿಸಿದಾಗ, ‘ಆ ರಸ್ತೆಯ ದುಃಸ್ಥಿತಿ ಗಮನಕ್ಕೆ ಬಂದಿದೆ. ಈಚೆಗೆ ನಡೆದ ಜಿಲ್ಲಾ ರಸ್ತೆ ಸಂಚಾರ ಪ್ರಾಧಿಕಾರದ ಸಭೆಯಲ್ಲಿಯೂ ಪ್ರಸ್ತಾಪವಾಗಿದೆ. ಆದರೆ ಅದು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ’ ಎಂದರು.

ನಮ್ಮ ವ್ಯಾಪ್ತಿಗೆ ಬರದ ಕಾರಣ ಆ ರಸ್ತೆಯ ಕಾಮಗಾರಿ ಪ್ರಸ್ತಾಪ ನಗರ­ಸಭೆಯ ಮುಂದಿಲ್ಲ. ಲೋಕೋಪ­ಯೋಗಿ ಇಲಾಖೆ ಮುಂದಿರುವ ಬಗೆಗೆ ತಮಗೆ ಮಾಹಿತಿ ಇಲ್ಲ. ರಸ್ತೆಯಲ್ಲಿಎರಡು ಕಡೆ ಮಣ್ಣು ಸಡಿಲವಾಗಿರುವುದು ಈ ಸ್ಥಿತಿಗೆ ಕಾರಣವಿರಬಹುದು. ಇದೇ ಕಾರಣಕ್ಕೆ ಅಲ್ಪಾವಧಿಯಲ್ಲೇ ಆ ಸ್ಥಿತಿಗೆ ಬಂದಿದೆ ಎನ್ನುತ್ತಾರೆ.

ಕಾಮಗಾರಿ ನಡೆದ ಎರಡು ತಿಂಗಳಲ್ಲಿಯೇ ರಸ್ತೆ ಈ ಸ್ಥಿತಿಗೆ ಬಂದಿರುವ ಕಾರಣ ಕನಿಷ್ಠ ಲೋಪ ಕುರಿತು ಕ್ರಮ ಜರುಗಿಸುವ ಹೊಣೆಗಾರಿಕೆಯನ್ನಾದರೂ ಸಂಬಂಧಿತ ಅಧಿಕಾರಿಗಳು ತೋರಬೇಕು. ತೋರುತ್ತಾರಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.