ADVERTISEMENT

ಕಬ್ಬಿನ ಹಣ ಕೊಡಿ ಇಲ್ಲವೇ, ಕುರ್ಚಿ ಬಿಡಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 10:00 IST
Last Updated 16 ಫೆಬ್ರುವರಿ 2011, 10:00 IST

ಬೀದರ್:  ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿರುವ ರೈತರಿಗೆ ಕೂಡಲೇ ಹಣ ಕೊಡಬೇಕು ಇಲ್ಲವೇ ಸುಭಾಷ ಕಲ್ಲೂರ ಅವರು ಅಧ್ಯಕ್ಷ ಸ್ಥಾನ ಬಿಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಾಖಾನೆಯ ಇತಿಹಾಸದಲ್ಲಿ ಹಿಂದೆ ಯಾರೂ ಮಾಡದಂತೆ 15 ದಿನಕ್ಕೆ ಒಮ್ಮೆ ಕಬ್ಬು ಸಾಗಿಸಿದ ರೈತರಿಗೆ ಹಣ ಪಾವತಿಸುವುದಾಗಿ ಕಲ್ಲೂರ ವಾಗ್ದಾನ ಮಾಡಿದ್ದರು. ಆದರೆ, ಅವರ ಭರವಸೆ ಕೇವಲ ಎರಡು ಕಂತುಗಳಿಗೆ ಮಾತ್ರ ಸೀಮಿತವಾಗಿದೆ ಎಂದು 33 ಜನರ ರೈತರು ಸಹಿ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಆಪಾದಿಸಿದ್ದಾರೆ.

ಡಿಸೆಂಬರ್ 15 ರ ವರೆಗೆ ಕಬ್ಬು ಸಾಗಿಸಿದ ರೈತರಿಗೆ ಹಣ ಪಾವತಿ ಮಾಡಲಾಗಿದೆ. ನಂತರ ಈವರೆಗೆ ಅಂದರೆ ಕಳೆದ ಎರಡು ತಿಂಗಳಿಂದ ಕಬ್ಬಿನ ನಯಾಪೈಸೆ ಸಂದಾಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಈ ಬಾರಿ ಅತಿವೃಷ್ಟಿಯಿಂದ ಎಲ್ಲ ಬೆಳೆಗಳು ಹಾಳಾಗಿವೆ. ಸಾಲ ಸೂಲ ಮಾಡಿ ಬೆಳೆದಿರುವ ಕಬ್ಬು ಮಾತ್ರ ಉಳಿದಿದೆ. ಆದರೆ. ಬೆಳೆದು ನಿಂತ ಕಬ್ಬು ಸರಿಯಾದ ಸಮಯಕ್ಕೆ ಕಾರ್ಖಾನೆಗೆ ಹೋಗದಿದ್ದರಿಂದ ರೈತರು ಹೈರಾಣಾಗಿದ್ದಾರೆ. ನವೆಂಬರ್‌ನಲ್ಲಿ ಹೋಗಬೇಕಾಗಿದ್ದ ಕಬ್ಬು ಈಗ ಹೋಗುತ್ತಿದೆ.

ಮೊದಲೇ ಅತಿವೃಷ್ಟಿಯಿಂದ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಇದೀಗ ಕಾರ್ಖಾನೆಗೆ ಹೋಗಲು ತಡವಾಗಿದ್ದರಿಂದ ಹೂ ಬಿಟ್ಟು ಒಣಗಿ ಹೋಗುತ್ತಿದೆ. ರೈತರು ಸಂಕಟದಲ್ಲಿ ಸಿಲುಕುವಂತಾಗಿದೆ ಎಂದು ತಿಳಿಸಿದ್ದಾರೆ. ಕಟಾವು ಗ್ಯಾಂಗ್‌ಗಳು ಒಂದು ಎಕರೆಗೆ ಐದಾರು ಸಾವಿರ ರೂ. ಕೇಳುತ್ತಿದ್ದಾರೆ ಎಂದು ಆಪಾಸಿದ್ದಾರೆ. ಕಾರ್ಖಾನೆಯವರು ಸಮಯಕ್ಕೆ ಸರಿಯಾಗಿ ರೈತರ ಕಬ್ಬು ಸಾಗಿಸುತ್ತಿಲ್ಲ. ಇದರಿಂದ ಸಾಲದ ಸುಳಿಯಲ್ಲಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯ ಅಧ್ಯಕ್ಷರಿಗೆ ರೈತರ ಬಗ್ಗೆ ಕಳಕಳಿ ಇಲ್ಲ. ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕಟಾವು ಗ್ಯಾಂಗ್ ಕಳುಹಿಸುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ರೈತರು ಕಾರ್ಖಾನೆಯಲ್ಲಿ ಧರಣಿ ನಡೆಸಿದ ಸಂದರ್ಭದಲ್ಲಿ ಫೆಬ್ರವರಿ 10 ರ ಒಳಗೆ ರೈತರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಭರವಸೆ ಈಡೇರಿಸಿಲ್ಲ. ಕಾರ್ಖಾನೆ ನಡೆಸುವುದಕ್ಕೆ ಸಾಧ್ಯವಾಗದಿದ್ದರೆ ನೈತಿಕ ಹೊಣೆ ಹೊತ್ತು ಕಲ್ಲೂರ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

2 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ರೈತರ ಕಬ್ಬಿನ ಹಣವನ್ನು ಕೂಡಲೇ ಬಡ್ಡಿ ಸಮೇತ ಪಾವತಿಸಬೇಕು. ಕಾರ್ಖಾನೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಇದರ ಹೊಣೆ ಹೋರಬೇಕು. ಹೆಚ್ಚಿನ ಕಟಾವು ಗ್ಯಾಂಗ್‌ಗಳನ್ನು ತರಿಸಿ ರೈತರ ಕಬ್ಬು ತುರ್ತಾಗಿ ಕಾರ್ಖಾನೆ ಸಾಗಿಸಬೇಕು ಎಂದು ಒತ್ತಾಯಿಸಿದ್ದಾರೆ. ರೈತರಾದ ರಾಮಣ್ಣ ಪಾಪಣ್ಣ, ವೈಜಿನಾಥ ಗೋರನಳ್ಳಿ, ಕಾಶಮ್ಮ ಶಿವರಾಜ, ಚಂದ್ರಪ್ಪ ಗಂಗಣ್ಣ, ಶಾಂತಪ್ಪ ಸಿದ್ಧಪ್ಪನೋರ್, ಲಾಲ್ ಅಹಮ್ಮದ್, ಸತೀಶ ಚೀನಕೇರಾ, ಅಮರ, ಯಾದಪ್ಪ ಭೀಮಣ್ಣ, ಸುಶೀಲಾಬಾಯಿ, ಶಾಮರಾವ, ರಮೇಶ ವಿಶ್ವನಾಥ, ಪ್ರಕಾಶ ಪಾಟೀಲ್, ಬಸವರಾಜ ಖಡ್ಕೆ ಸೇರಿದಂತೆ 33 ರೈತರು ಹೇಳಿಕೆಗೆ ಅಂಕಿತ ಹಾಕಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.