ADVERTISEMENT

‘ಕುಡಿತದಿಂದ ಅಪರಾಧ ಪ್ರಕರಣ ಹೆಚ್ಚಳ’

ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 7:31 IST
Last Updated 25 ಏಪ್ರಿಲ್ 2018, 7:31 IST

ಭಾಲ್ಕಿ: ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಕುಡಿತದ ಚಟವೇ ಕಾರಣ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಹಿರೇಮಠ ಸಂಸ್ಥಾನದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದರ ವಿರುದ್ಧ ನಿರಂತರವಾಗಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಶೇ 60ರಷ್ಟು ಅಪಘಾತದಂತಹ ಪ್ರಕರಣಗಳು ಕುಡಿತ, ಗಾಂಜಾ, ಇತರೆ ನಶೆ ವಸ್ತುಗಳ ಸೇವನೆಯಿಂದ ಸಂಭವಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಮಾದಕ ವ್ಯಸನಗಳ ಮಾರಾಟದಿಂದ ರಾಜ್ಯಕ್ಕೆ ಪ್ರತಿ ವರ್ಷ ₹ 18.5 ಸಾವಿರ ಕೋಟಿ ಆದಾಯ ಬರುತ್ತಿದೆ. ಆದರೆ ಅಷ್ಟೇ ಪ್ರಮಾಣದ ಹಣ ಜನರ ಆರೋಗ್ಯ ಸೇವೆಗಾಗಿ ಸರ್ಕಾರ ಖರ್ಚು ಮಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಾದಕ ವ್ಯಸನವು ವ್ಯಕ್ತಿಯ ಕನಸು ಮತ್ತು ಗುರಿ ನಾಶ ಮಾಡುತ್ತದೆ. ಕ್ರಮೇಣ ಕುಟುಂಬವೇ ನಾಶವಾಗುತ್ತದೆ. ಯುವ ಜನತೆ ಈ ವ್ಯಸನದಿಂದ ದೂರ ಇರಬೇಕು. ವ್ಯಸನದ ವಿರುದ್ಧ ಇಡೀ ಸಮಾಜ ಹೋರಾಟಕ್ಕೆ ಇಳಿಯಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಮೀನಾಕುಮಾರಿ ಮಾತನಾಡಿ, ‘ಸಹವಾಸ ದೋಷದಿಂದ ಯುವ ಜನತೆಯ ಜೀವನ ಹಾಳಾಗುತ್ತಿದೆ. ಹಾಗಾಗಿ, ಒಳ್ಳೆಯವರ ಸಹವಾಸ ಮಾಡಬೇಕು’ ಎಂದು ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಸಂಯೋಜಕ ನಾರಾಯಣ ಜಿ ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಲವು ಯೋಜನೆಗಳು ಜಾರಿಗೆ ತಂದಿದೆ’ ಎಂದು ತಿಳಿಸಿದರು.

ಮಹಾಲಿಂಗ ಸ್ವಾಮೀಜಿ ಮಾತನಾಡಿದರು. ಕಲ್ಲೇಶ್ವರ ಸ್ವಾಮಿಜಿ ಸಮ್ಮುಖ ವಹಿಸಿದ್ದರು. ಪ್ರಾಚಾರ್ಯ ಬಸವರಾಜ್‌ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಲಕ್ಷ್ಮಣ ಮೇತ್ರೆ ನಿರೂಪಿಸಿದರು.

ಆಡಳಿತಾಧಿಕಾರಿ ಮೋಹನ ರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.