ADVERTISEMENT

ಕೃಷ್ಣಮೃಗಗಳ ಬೇಟೆ ಸಂಚು ಬಯಲು!

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 7:40 IST
Last Updated 9 ನವೆಂಬರ್ 2012, 7:40 IST
ಕೃಷ್ಣಮೃಗಗಳ ಬೇಟೆ ಸಂಚು ಬಯಲು!
ಕೃಷ್ಣಮೃಗಗಳ ಬೇಟೆ ಸಂಚು ಬಯಲು!   

ಬೀದರ್: ನಗರ ಹೊರವಲಯದಲ್ಲಿ ವಾಯುಪಡೆ ಕೇಂದ್ರದ ಹಿಂಭಾಗದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಕೃಷ್ಣ ಮೃಗಗಳನ್ನು ಕಬ್ಬಿಣದ ಬಲೆ ಹಾಕಿ ಹಿಡಿಯುತ್ತಿರುವ  ಬೆಳವಣಿಗೆ ಬೆಳಕಿಗೆ ಬಂದಿದ್ದು, ಹೀಗೆ ಇಡಲಾಗಿದ್ದ ಬಲೆಗೆ ಸಿಕ್ಕಿಕೊಂಡ ಕೃಷ್ಣಮೃಗದ ಕಾಲು ಕತ್ತರಿಸಿಹೋಗಿರುವ ಘಟನೆ ನಡೆದಿದೆ.

ಕೃಷ್ಣಮೃಗದ ಹಿಂಭಾಗದ ಎಡಕಾಲು ಕೆಳಭಾಗದಲ್ಲಿ ಬಹುತೇಕ ಕತ್ತರಿಸಿಹೋಗಿದ್ದು, ಬಲಕಾಲಿಗೂ ಭಾಗಶಃ ಪೆಟ್ಟಾಗಿದೆ. ಬೆಳಿಗ್ಗೆ ಆ ಭಾಗದಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ತೆರಳಿದ್ದ ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯ ಸಿಬ್ಬಂದಿ ತೆರಳಿದಾಗ ಈ ಬೆಳವಣಿಗೆ ಕಂಡುಬಂದಿದೆ.

ಬಲೆಗೆ ಸಿಕ್ಕಿಕೊಂಡು ನೋವಿನಿಂದ ನರಳುತ್ತಿದ್ದ ಕೃಷ್ಣಮೃಗವನ್ನು ಸಿಬ್ಬಂದಿಯೇ ಪಾರು ಮಾಡಿದ್ದಾರೆ. ತಕ್ಷಣವೇ ಅವರು ಅರಣ್ಯ ಇಲಾಖೆಯ ಸಿಬ್ಬಂದಿಗೂ ಮಾಹಿತಿ ನೀಡಿದ್ದಾರೆ. ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ್ದ ಡಿಆರ್‌ಎಫ್‌ಒ ಉಮಾಕಾಂತ್ ಅವರು, ಕೃಷ್ಣಮೃಗವನ್ನು ವಶಕ್ಕೆ ತೆಗೆದುಕೊಂಡಿದ್ದು, ಚಿಕಿತ್ಸೆಯನ್ನು ಕೊಡಿಸಲು ಒಯ್ದುರು.

ದುಷ್ಕರ್ಮಿಗಳ ಕೃತ್ಯ:
ವಾಯುಪಡೆ ಕೇಂದ್ರದ ಹಿಂಭಾಗದ ಬಯಲಿನಲ್ಲಿ, ಬೆಳ್ಳೂರಿಗೆ ಸಮೀಪದಲ್ಲಿ ಸಾಮಾನ್ಯವಾಗಿ ಬೆಳಗಿನ ಹೊತ್ತು ಸಾಕಷ್ಟು ಕೃಷ್ಣಮೃಗ, ಜಿಂಕೆಗಳು ಕಂಡು ಬರುತ್ತವೆ. ಬಹುಶಃ ಇವುಗಳನ್ನು ಹಿಡಿಯಲು ಕೆಲ ದುಷ್ಕರ್ಮಿಗಳು ಕಾರ್ಯತತ್ಪರವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

`ಕೃಷ್ಣಮೃಗ ಹಿಡಿಯಲು ಕಬ್ಬಿಣದ ಬಲೆ ಹಾಕಿರುವ ಘಟನೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಇದೇ ಮೊದಲಿಗೆ ಗಮನಕ್ಕೆ ಬಂದಿದೆ. ಕಬ್ಬಿಣದ ಬಲೆಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಇಂಥ ಪ್ರಕರಣಗಳು ಘಟಿಸದಂತೆ ಗಮನಿಸಲಾಗುವುದು~ ಎಂದು ಅಧಿಕಾರಿ ಪ್ರತಿಕ್ರಿಯಿಸಿದರು.

ಶಸ್ತ್ರಚಿಕಿತ್ಸೆ:
ಕೃಷ್ಣಮೃಗಕ್ಕೆ ಬಳಿಕ ಶಸ್ತ್ರಚಿಕಿತ್ಸೆ ನೆರವೇರಿಸಿ, ಕಾಲಿಗೆ ರಾಡ್ ಅಳವಡಿಸಿದ್ದು, ಗುಣಮುಖ ಆಗುವವರೆಗೆ ದೇವ ದೇವವನದ ಭಾಗದಲ್ಲಿ ಬಿಡಲಾಗುವುದು ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.