ADVERTISEMENT

ಕ್ಷೇತ್ರದ ಅಭಿವೃದ್ಧಿಯೇ ನನ್ನ ಆದ್ಯತೆ: ಧನಾಜಿ ಜಾಧವ್

ಔರಾದ್‌ನಲ್ಲಿ ಬಿಎಸ್‌ಪಿ ಮೈತ್ರಿಯಿಂದ ಜೆಡಿಎಸ್‌ಗೆ ದೊರೆಯಲಿದೆ ಆನೆ ಬಲ

​ಪ್ರಜಾವಾಣಿ ವಾರ್ತೆ
Published 6 ಮೇ 2018, 8:32 IST
Last Updated 6 ಮೇ 2018, 8:32 IST
ಧನಾಜಿ ಜಾಧವ್
ಧನಾಜಿ ಜಾಧವ್   

ಔರಾದ್‌: ಕಳೆದ ಒಂದೂವರೆ ದಶಕದಿಂದ ರಾಜಕೀಯ ನಂಟು ಹೊಂದಿರುವ ಧನಾಜಿ ಜಾಧವ್ 2004ರಲ್ಲಿ ಬೀದರ್ ಮೀಸಲು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2013ರಲ್ಲಿ ಔರಾದ್ ಮೀಸಲು ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 30 ಸಾವಿರ ಮತ ಪಡೆದು ಸೋಲುಂಡರು. ಈ ಸಲ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಜಾಧವ್ ಬಿಎಸ್‌ಪಿ ಮೈತ್ರಿಯಿಂದ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೊನೆ ಘಳಿಗೆಯಲ್ಲಿ ಪಕ್ಷಾಂತರ ಮಾಡಿದ್ದು ಸರಿಯೇ?

ಬಿಜೆಪಿಯವರು ನನಗೆ ಅನ್ಯಾಯ ಮಾಡಿದ್ದಾರೆ. ಕಳೆದ ಬಾರಿ ನಾನು ಬಿ.ಎಸ್. ಯಡಿಯೂರಪ್ಪ ಅವರನ್ನು ನಂಬಿ ಕೆಜೆಪಿ ಸೇರಿದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಸಾಕಷ್ಟು ಪೈಪೋಟಿ ನಡೆಸಿ 30 ಸಾವಿರ ಮತ ಪಡೆದೆ. ಆದರೆ ಬಿಜೆಪಿ–ಕೆಜೆಪಿ ವಿಲೀನವಾದ ನಂತರ ಯಡಿಯೂರಪ್ಪ ಅವರು ನನ್ನನ್ನು ಕಡೆಗಣಿಸಿದರು. ಟಿಕೆಟ್ ಹಂಚಿಕೆ ವೇಳೆ ಸೌಜನ್ಯಕ್ಕಾದರೂ ನನಗೆ ಮಾತನಾಡಿಸಿಲ್ಲ. ಇದರಿಂದ ನನಗೆ ಮಾನಸಿಕ ನೋವಾಗಿ ಪಕ್ಷ ಬಿಡಬೇಕಾಯಿತು.

ADVERTISEMENT

ಎರಡು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಜತೆ ಹೇಗೆ ಚುನಾವಣೆ ಎದುರಿಸುತ್ತೀರಿ?

ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಬಳಿ ಸಾಕಷ್ಟು ಹಣ ಇದೆ. ಅವರು ಹಣ ಮತ್ತು ಹೆಂಡದ ಮೇಲೆ ಚುನಾವಣೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಕ್ಷೇತ್ರದ ಮತದಾರರು ಅದಕ್ಕೆ ಅವಕಾಶ ನೀಡಲಾರರು. ಎರಡು ಬಾರಿ ಶಾಸಕರಾದ ಪ್ರಭು ಚವಾಣ್ ಅವರಿಂದ ಜನ ಬೇಸತ್ತು ಹೋಗಿದ್ದಾರೆ. ಇನ್ನು ಕಾಂಗ್ರೆಸ್‌ನವರು ಹೊರಗಿನ ಅಭ್ಯರ್ಥಿಯನ್ನು ತಂದು ನಿಲ್ಲಿಸಿದ್ದಾರೆ. ಹೀಗಾಗಿ ಕ್ಷೇತ್ರದ ಎಲ್ಲ ಸಮುದಾಯ ಜನ ಜೆಡಿಎಸ್ ಬೆಂಬಲಿಸಲಿದ್ದಾರೆ.

ಜೆಡಿಎಸ್‌ನಲ್ಲಿ ನಿಮಗೆ ಭವಿಷ್ಯ ವಿದೆಯೇ?

ಜೆಡಿಎಸ್ ವರಿಷ್ಠ ದೇವೇಗೌಡರು ನನ್ನನ್ನು ಮನೆಗೆ ಕರೆಸಿ ಮಾತನಾಡಿದರು. ನನ್ನ ಕಷ್ಟು ಸುಖ ಕೇಳಿದರು. ಧೈರ್ಯ ತುಂಬಿ ಚುನಾವಣೆಗೆ ನಿಲ್ಲುವಂತೆ ಹೇಳಿದರು. ಈ ಕಾರಣಕ್ಕಾಗಿ ನಾನು ಧೈರ್ಯದಿಂದ ಕಣದಲ್ಲಿ ಇಳಿದಿದ್ದೇನೆ. ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರ ಆಶೀರ್ವಾದ ನನಗಿದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಆಗಲಿದ್ದು, ನನಗೆ ಸೂಕ್ತ ಸ್ಥಾನ ಮಾನವೂ ಸಿಗುವ ವಿಶ್ವಾಸವಿದೆ.

ಕ್ಷೇತ್ರದಲ್ಲಿ ನೀವು ಗುರುತಿಸಿದ ಸಮಸ್ಯೆಗಳಾವುವು?

ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇಲ್ಲಿ ಸೋಯಾಬಿನ್ ಸಾಕಷ್ಟು ಬೆಳೆಯುತ್ತದೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲ. ಹೀಗಾಗಿ ಇಲ್ಲಿ ಸೋಯಾಬಿನ್‌ನಿಂದ ಕೆಲ ಉತ್ಪನ ತಯಾರಿಕೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಗೋದಾವರಿ ನದಿ ನೀರು ಬಳಸಿಕೊಳ್ಳಲು ಅವಕಾಶವಿದೆ. ಇಲ್ಲಿ ಹೆಚ್ಚು ಬ್ಯಾರೇಜ್ ಮತ್ತು ಕೆರೆಗಳು ನಿರ್ಮಾಣ ಮಾಡಿದರೆ ರೈತರಿಗೆ ಸಹಾಯವಾಗಲಿದೆ.

ನಿಮ್ಮನ್ನು ಏಕೆ ಆಯ್ಕೆ ಮಾಡ ಬೇಕು?

ಜನ ಎರಡು ಅವಧಿಗೆ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನೋಡಿದ್ದಾರೆ. ಅವರಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬುದು ಜನತೆಗೆ ಚೆನ್ನಾಗಿ ಗೊತ್ತಿದೆ. ಸುಶಿಕ್ಷಿತರನ್ನು ಆಯ್ಕೆ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ಜನರಿಗೆ ಅರಿವಿದೆ. ಜನರು ಚುನಾವಣೆಯಲ್ಲಿ ಮತ ಹಕ್ಕು ಚಲಾಯಿಸುವ ಮೂಲಕ ಅಭಿವೃದ್ಧಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಚುನಾವಣೆಯಲ್ಲಿ ಜಯಗಳಿಸಿದರೆ ನಿಮ್ಮ ಆದ್ಯತೆ ಏನು?

ನಾನು ರೈತ ಕುಟುಂಬದಿಂದ ಬಂದವನು. ರೈತರ ಕಷ್ಟ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ತಾಲ್ಲೂಕಿನ ರೈತರು ಆರ್ಥಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ಈಗಾಗಲೇ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಕ್ಷೇತ್ರದ ಜನರಿಗೆ ಆಧುನಿಕ ವೈದ್ಯಕೀಯ ಸೌಲಭ್ಯ ಸುಲಭವಾಗಿ ದೊರೆಯುಂತೆ ಮಾಡಲಾಗುವುದು. ಗ್ರಾಮೀಣ ಪ್ರದೇಶದ ಜನ ವಲಸೆ ಹೋಗುವುದು ತಪ್ಪಿಸಲು ಉದ್ಯೋಗಾವಕಾಶ ಸೃಷ್ಟಿಸಲಾಗುವುದು.

– ಮನ್ಮಥಪ್ಪ ಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.