ಬೀದರ್: ಸಾಹಿತ್ಯ ಆಸಕ್ತರನ್ನು, ನಿಯತಕಾಲಿಕೆಗಳ ಓದುಗರಿಗೆ ಹತ್ತಿರವಾಗಬೇಕಾದ ಜಿಲ್ಲಾ ಕೇಂದ್ರ ಗ್ರಂಥಾಲಯ ಈಗ ತನ್ನ ಅವ್ಯವಸ್ಥೆಯ ಪರಿಣಾಮ ದೂರ ಉಳಿದಿದೆ. ದೂಳಿನಿಂದ ಆವೃತ್ತವಾದ ಆವರಣ, ಅವ್ಯವಸ್ಥಿತವಾಗಿ ಜೋಡಿಸಲಾಗಿರುವ ಪುಸ್ತಕಗಳು ಕಪಾಟು, ದೂಳು ಹಿಡಿಯುತ್ತಿರುವ ಪುಸ್ತಕಗಳ ಸಾಲು ಇಲ್ಲಿ ಕಾಣಿಸುವ ಚಿತ್ರಣ.
ನಗರದ ಜನವಾಡ ರಸ್ತೆಯಲ್ಲಿ ಇರುವ ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ಗೋಡೆ ಸುಣ್ಣ-ಬಣ್ಣ ಕಾಣದೇ ಕಳೆಗುಂದಿದೆ. ಗ್ರಂಥಾಲಯದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ರೋಗಗಳ ಉಗಮ ತಾಣವೆಂಬಂತಿದೆ. ಕಿಟಕಿಯ ಗಾಜುಗಳು ಒಡೆದಿವೆ.
ಇಲ್ಲಿನ ಸ್ಥಿತಿಯು ಓದುಗರನ್ನು ಸೆಳೆಯುವ ಬದಲಿಗೆ, ಅವರು ಗ್ರಂಥಾಲಯದಿಂದ ಮಾರು ದೂರ ಹೋಗುವಂತಿದೆ. ಹೀಗಾಗಿ, ದಿನಪತ್ರಿಕೆಗಳ ಓದುಗರನ್ನು ಹೊರತು ಪಡಿಸಿದರೆ ಇತರೆ ಓದುಗರನ್ನು ಇಲ್ಲಿ ಕಾಣುವುದು ದುರ್ಲಭ. ಇನ್ನು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಮಾತ್ರ ಗ್ರಂಥಾಲಯದಿಂದ ದೂರವೇ ಉಳಿದಿದ್ದಾರೆ.
ಇಲ್ಲಿ, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಓದಲು ಪ್ರತೇಕವಾದ ವಿಭಾಗದ ವ್ಯವಸ್ಥೆ ಇಲ್ಲದ ಕಾರಣ ದಿನಪತ್ರಿಕೆಗಳು, ಪುಸ್ತಕಗಳು ಓದಲು ಬರುವ ಮಹಿಳೆಯರ, ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಎಂಬ ಅಭಿಪ್ರಾಯವು ಇದೆ. ಇನ್ನೂ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳ ವಿವರ ಕುರಿತ ಸ್ಪಷ್ಟ ಮಾಹಿತಿಯೂ ಇಲ್ಲ. ರಾಜ್ಯಶಾಸ್ತ್ರ ವಿಭಾಗದಲ್ಲಿ ಅರ್ಥಶಾಸ್ತ್ರ ವಿಷಯದ ಪುಸ್ತಕಗಳು, ಸಾಹಿತ್ಯ ವಿಭಾಗದಲ್ಲಿ ಇತಿಹಾಸದ ಪುಸ್ತಕಗಳು ಸಿಗುತ್ತವೆ.
ಬೆಳಕಿನ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ವಿದ್ಯುತ್ ಕೈಕೊಟ್ಟ ಸಂದರ್ಭದಲ್ಲಿ ಪುಸ್ತಕ ಓದುವಿಕೆ ಕಷ್ಟ. ಈ ಎಲ್ಲ ಅವ್ಯವಸ್ಥೆಗಳ ಬಗೆಗೆ ಗ್ರಂಥಪಾಲಕ ಅಜಯ್‌ಕುಮಾರ್ ಅವರ ಗಮನಸೆಳೆದರೆ, ` ಗ್ರಂಥಾಲಯದ ಸ್ವಚ್ಛತೆಗೊಳಿಸಲು ವರ್ಷಕ್ಕೆ ಬರಬೇಕಾದ ಗ್ರಂಥಾಲಯದ ಕರ ಬರುತ್ತಿಲ್ಲ. ಸಿಬ್ಬಂದಿ ಕೊರತೆ ಇದ್ದ ಕಾರಣ ಪುಸ್ತಕಗಳನ್ನು ಸಮರ್ಪಕವಾಗಿ ಜೋಡಿಸಲು ಆಗುತ್ತಿಲ್ಲ' ಎನ್ನುತ್ತಾರೆ.
ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವೃದ್ಧರಿಗೆ ಪ್ರತ್ಯೇಕವಾದ ಸ್ಥಳ ನಿಗದಿಪಡಿಸುವ ಉದ್ದೇಶವಿದೆ. ಅನುದಾನ ಬಂದ ಬಳಿಕ ಆ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂಬುದು ಅವರ ಪ್ರತಿಕ್ರಿಯೆ. ಓದುವ ಅಭಿರುಚಿ ನಿಟ್ಟಿನಲ್ಲಿ ತುರ್ತಾಗಿ ಗ್ರಂಥಾಲಯಕ್ಕೆ ಕಾರ್ಯಕಲ್ಪ ನೀಡಬೇಕಾದ ಅಗತ್ಯವಿದೆ.
ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕೂಡಾ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಪೂರಕ ವಾತಾವರಣ ಕಲ್ಪಿಸಲು ಇಲ್ಲಿನ ಅವ್ಯವಸ್ಥೆಯ ವಿರುದ್ಧದನಿ ಎತ್ತದೇ ಇರುವುದು ವಿಪರ್ಯಾಸಕರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.