ADVERTISEMENT

ಜೋಳದ ಬೆಳೆಗೆ ಸೈನಿಕ ಹುಳು ಬಾಧೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:25 IST
Last Updated 6 ಡಿಸೆಂಬರ್ 2012, 6:25 IST

ಜನವಾಡ: ಜಿಲ್ಲೆಯಲ್ಲಿ ಜೋಳದ ಬೆಳೆಯಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು, ರೈತರಲ್ಲಿ ಆತಂಕ ಉಂಟು ಮಾಡಿದೆ.
ಬೀದರ್ ತಾಲ್ಲೂಕಿನ ಜನವಾಡ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ಜಿಲ್ಲೆಯಲ್ಲಿ ಮಂಗಳವಾರ ನಡೆಸಿದ ಸಮೀಕ್ಷೆ ವೇಳೆ ಇದು ಕಂಡು ಬಂದಿದೆ.

ಸೈನಿಕ ಕೀಟ ಪತಂಗ ಜಾತಿಗೆ ಸೇರಿದ್ದು, ಜೋಳದ ಎಲೆಗಳ ಮೇಲೆ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರ ಬರುವ ಮರಿಗಳು ಕೀಟ ಜೋಳದ ಸುಳಿ ಹಾಗೂ ಎಲೆಯನ್ನು ಹರಿದು ತಿನ್ನುತ್ತವೆ. ಸುಳಿಯಲ್ಲಿ ಈ ಕೀಟದ ಹಿಕ್ಕೆಗಳು ಕಂಡು ಬರುತ್ತವೆ ಎಂದು ತಿಳಿಸುತ್ತಾರೆ ತಂಡದ ಸದಸ್ಯರಲ್ಲಿ ಒಬ್ಬರಾದ ಕೃಷಿ ಕೀಟ ವಿಜ್ಞಾನಿ ಡಾ. ಸುನೀಲ್‌ಕುಮಾರ್ ಎನ್.ಎಂ.

ಇಂಥ ಕೀಟಗಳು ಕಂಡು ಬಂದಲ್ಲಿ ಅವುಗಳ ನಿರ್ವಹಣೆಗಾಗಿ ಮೊನೋಕ್ರೊಟೋಫಾಸ್ 36 ಎಸ್.ಎಲ್ 1 ಮಿ.ಲೀ ಅಥವಾ 0.1 ಮಿ.ಲೀ. ಸ್ಪೈನೋಸ್ಯಾಡ್ 45 ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಇಲ್ಲವೇ ವಿಷಪಾಶಾಣ ತಯಾರಿಸಿ ಸಾಲುಗಳಲ್ಲಿ ಎರಚಬೇಕು ಎಂದು ಸಲಹೆ ಮಾಡಿದ್ದಾರೆ.

20 ಕಿ.ಗ್ರಾಂ. ಬತ್ತ ಅಥವಾ ಗೋಧಿಯ ತೌಡು, ಎರಡು ಕಿ.ಗ್ರಾಂ. ಬೆಲ್ಲ, 250 ಮಿ.ಲೀ ಮೊನೋಕ್ರೊಟೋಫಾಸ್ 36 ಎಸ್.ಎಲ್ ಹಾಗೂ 2-3 ಲೀಟರ್ ನೀರನ್ನು ಬೆರೆಸಿ ವಿಷಪಾಶಾಣ ಸಿದ್ಧಪಡಿಸಬಹುದು ಎಂದು ತಿಳಿಸಿದ್ದಾರೆ.

ತಂಡ ತೊಗರಿ ಮತ್ತು ಕಡಲೆ ಬೆಳೆಗಳಲ್ಲಿ ಕೀಟ ಹಾಗೂ ರೋಗಗಳ ಸಮೀಕ್ಷೆಯನ್ನೂನಡೆಸಿದೆ. ತೊಗರಿ ಮತ್ತು ಕಡಲೆಯಲ್ಲಿ ಕಾಯಿಕೊರಕ ಬಾಧೆ ಉಂಟು ಮಾಡುವ ಕೀಟಗಳ ಸಂಖ್ಯೆ  ಆರ್ಥಿಕ ನಷ್ಟ ರೇಖೆ ತಲುಪಿವೆ ಎಂದು ಹೇಳಿದ್ದಾರೆ. 

ಕಾಯಿ ಕೊರಕಗಳು ಕಂಡು ಬಂದಲ್ಲಿ ಕೀಟನಾಶಕಗಳಾದ 0.1 ಮಿ.ಲೀ ಸ್ಪೈನೋಸ್ಯಾಡ್ 45 ಎಸ್‌ಸಿ ಅಥವಾ 0.2 ಗ್ರಾಂ. ಇಮಾಮೆಕ್ಟಿನ್ ಬೆಂಜೊಯೇಟ್ 5 ಎಸ್.ಜಿ. ಅಥವಾ ರೆನಾಕ್ಸಿಪೀಯರ್ 20 ಎಸ್.ಸಿ. ಅಥವಾ 0.3 ಮಿ.ಲೀ. ಇಂಡಾಕ್ಸಿಕಾರ್ಬ್ 14.5 ಎಸ್.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳಾದ ಕಲೀಮ್, ಸುಂದ್ರಮ್ಮ, ಡಾ. ಸಿದ್ರಾಮ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.