ADVERTISEMENT

ನಾಳೆಯಿಂದ ಸಂಪೂರ್ಣ ಶಿವದರ್ಶನ ಮೇಳ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:35 IST
Last Updated 11 ಫೆಬ್ರುವರಿ 2012, 5:35 IST

ಬೀದರ್: ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವದ ನಿಮಿತ್ತ ನಗರದ ನೆಹರು ಕ್ರೀಡಾಂಗಣದ ಹತ್ತಿರ ಇರುವ ಸಾಯಿ ಆದರ್ಶ ಪ್ರೌಢಶಾಲೆ ಆವರಣದಲ್ಲಿ ಫೆಬ್ರುವರಿ 12 ರಿಂದ 26 ರವರೆಗೆ ಸಂಪೂರ್ಣ ಶಿವದರ್ಶನ ಮೇಳ ಆಯೋಜಿಸಲಾಗಿದೆ.

ಮುಂಬೈನ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಲತಾ ಬಹೇನ್‌ಜಿ ಹಾಗೂ ಸ್ಥಳೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೇನ್‌ಜಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮೇಳದ ವಿವರ ನೀಡಿದರು.
`ವಿಶ್ವ ಒಂದೇ, ವಿಶ್ವಪಿತಾ ಪರಮಾತ್ಮ ಒಬ್ಬನೇ, ವಿಶ್ವಕುಟುಂಬ ಒಂದೇ~ ಎಂಬ ಶೀರ್ಷಿಕೆಯಡಿ 2012ನೇ ವರ್ಷ ದೇಶದೆಲ್ಲೆಡೆ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕಳೆದ ನವೆಂಬರ್‌ನಲ್ಲಿ ನವದೆಹಲಿಯಲ್ಲಿ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.

ಮಹೋತ್ಸವದ ಅಂಗವಾಗಿ ನಗರದಲ್ಲಿ ಶಿವದರ್ಶನ ಮೇಳ ಏರ್ಪಡಿಸಲಾಗಿದೆ. ಮೇಳಕ್ಕಾಗಿ ಈಗಾಗಲೇ ಬೃಹತ್ ಮಂಟಪ ಸಿದ್ಧಪಡಿಸಲಾಗಿದೆ.

ಮಂಟಪದಲ್ಲಿ ಒಟ್ಟು 22 ಅಂಗಡಿಗಳು ಇರಲಿವೆ. ಇದರಲ್ಲಿ ಸಮ್ಮೇಳನದ ಉದ್ದೇಶ, ಅರಣ್ಯ ದರ್ಶನ, ಸರ್ವ ಧರ್ಮದ ಘೋಷಣೆ, 12 ಜ್ಯೋತಿರ್ಲಿಂಗ ದರ್ಶನ ಹೀಗೆ ಒಂದೊಂದು ಮಳಿಗೆಯಲ್ಲಿಯು ವಿನೂತನ ರೀತಿಯ ಪ್ರದರ್ಶನಗಳು ಇರಲಿವೆ. ನೂರಕ್ಕೂ ಅಧಿಕ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ ವ್ಯಸನ, ಭ್ರಷ್ಟಾಚಾರ, ದುರಾಡಳಿತಕ್ಕೆ ಬಲಿಯಾಗಿ ಜನ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸನ್ಮಾರ್ಗದಲ್ಲಿ ಸಾಗಿದರೆ ಮಾತ್ರ ಶಾಂತಿ, ನೆಮ್ಮದಿಯ ಜೀವನ ಸಾಧ್ಯವಿದೆ ಎಂದರು.

ಮೇಳದಲ್ಲಿ ಮಾನವನ ಜೀವನದಲ್ಲಿ ಆಗುವ ಏರಿಳಿತ ಹಾಗೂ ಅದರಿಂದ ಪಾರಾಗುವ ಸುಲಭ ಮಾರ್ಗಗಳ ದರ್ಶನವಾಗಲಿದೆ. ಅಜ್ಞಾನದ ಅಂಧಕಾರದಲ್ಲಿ ಬದುಕುತ್ತಿರುವವರನ್ನು ಬೆಳಕಿನತ್ತ ಕರೆದೊಯ್ಯುವುದೇ ಮೇಳದ ಉದ್ದೇಶವಾಗಿದೆ ವಿವರಿಸಿದರು.

ಫೆಬ್ರುವರಿ 12 ರಿಂದ 26 ರ ವರೆಗೆ ಪ್ರತಿ ದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಮತ್ತು ಸಾಯಂಕಾಲ 4 ರಿಂದ ರಾತ್ರಿ 9 ಗಂಟೆವರೆಗೆ ಪ್ರದರ್ಶನವನ್ನು ವೀಕ್ಷಿಸಬಹುದು. ಪ್ರವಚನ ಕಾರ್ಯಕ್ರಮವೂ ನಡೆಯಲಿದೆ ಎಂದು ಹೇಳಿದರು.

12 ರಂದು ಸಂಜೆ 5 ಗಂಟೆಗೆ ಮೇಳದ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೌಂಟ್ ಅಬುದ ಬ್ರಹ್ಮಕುಮಾರಿ ದಾದಿರತನ್ ಮೋಹಿನಿ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕುಮಾರಿ ಸಂತೋಷ ಬಹೇನ್‌ಜಿ ಶಿವಸಂದೇಶ ನೀಡಲಿದ್ದಾರೆ. ಸಂಸದ ಎನ್. ಧರ್ಮಸಿಂಗ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅಥಿಗಳಾಗಿ ನಾರಾಯಣಖೇಡ್ ಸಂಸದ ಸುರೇಶ ಶೆಟಕಾರ್, ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ, ಶಾಸಕ ಬಂಡೆಪ್ಪ ಕಾಶೆಂಪೂರ್ ಪಾಲ್ಗೊಳ್ಳಲಿದ್ದಾರೆ.

ಅನೇಕ ಗಣ್ಯರನ್ನು ಸನ್ಮಾನಿಸಲಾಗುತ್ತದೆ. ಬ್ರಹ್ಮಕುಮಾರಿ ಕುಲದೀಪ ಬಹೇನ್‌ಜಿ ರಾಜಯೋಗ ಅಭ್ಯಾಸ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಶೋಭಾಯಾತ್ರೆ: ಸಂಪೂರ್ಣ ಶಿವದರ್ಶನ ನಿಮಿತ್ತ ಫೆಬ್ರುವರಿ 11 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾಯಿ ಆದರ್ಶ ಪ್ರೌಢಶಾಲೆಯಿಂದ ನಗರದಲ್ಲಿ ಶಿವದರ್ಶನ ಬಿಂಬಿಸುವ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.