ADVERTISEMENT

ನೆಹರೂ ಕ್ರೀಡಾಂಗಣ ಮೇಲ್ಛಾವಣಿ ತೆರವು

ಶಿಥಿಲಗೊಂಡಿದ್ದ ಮೇಲ್ಛಾವಣಿ ತೆರವು ಕಾರ್ಯಾಚರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 9:31 IST
Last Updated 5 ಡಿಸೆಂಬರ್ 2016, 9:31 IST

ಬೀದರ್:  ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದ ಶಿಥಿಲಗೊಂಡಿದ್ದ ಮೇಲ್ಛಾವಣಿ ತೆರವುಗೊಳಿಸುವ ಕಾರ್ಯ ಭಾನುವಾರ ನಡೆಯಿತು. ಜಿಲ್ಲಾಡಳಿತದ ಆದೇಶದ ಮೇರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು  ದುಃಸ್ಥಿತಿಯಲ್ಲಿದ್ದ ಕ್ರೀಡಾಂಗಣ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ತೆರವು ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಲಾಗಿದೆ.

ಕ್ರೀಡಾಂಗಣದ ಮೇಲ್ಛಾವಣಿಯನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು,ತೆರವು ಕಾರ್ಯಾಚರಣೆಯು ಭಾನುವಾರವೂ ಮುಂದುವರೆಯಿತು.

10 ಎಕರೆ ಪ್ರದೇಶದ ಸುತ್ತಮುತ್ತ ನಿರ್ಮಿಸಲಾಗಿದ್ದ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುವ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಮೇಲ್ಛಾವಣಿಯು ಸಂಪೂರ್ಣವಾಗಿ ಶಿಥಿಲಗೊಂಡು ಆತಂಕಕ್ಕೆ ಕಾರಣವಾಗಿತ್ತು.

ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳ ಹಿತದೃಷ್ಟಿಯಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್‌.ಜಿ. ನಾಡಗೇರ್‌ ತಿಳಿಸಿದ್ದಾರೆ.

ಗುರುನಾನಕ ಶಾಲೆಗೆ ತೆರಳುವ ಮಾರ್ಗದಲ್ಲಿರುವ ಕ್ರೀಡಾಂಗಣದ ಮೇಲ್ಛಾವಣಿಯನ್ನು ತೆರವುಗೊಳಿಸಲಾಗಿದೆ. ಮೇಲ್ಛಾವಣಿ ಕೆಳಗಡೆ ಒಟ್ಟು 180 ಮಳಿಗೆಗಳು ಇದ್ದವು. ಈ ಪೈಕಿ ಈಗ ಕೇವಲ 30 ಮಳಿಗೆಗಳು ಮಾತ್ರ ಇವೆ. ಅವುಗಳನ್ನು ಖಾಲಿ ಮಾಡುವಂತೆ ವ್ಯಾಪಾರಿಗಳಿಗೆ ಒಂದು ತಿಂಗಳ ಹಿಂದೆ ನೋಟಿಸ್ ನೀಡಲಾಗಿದೆ.

ವ್ಯಾಪಾರಿಗಳು ಮಳಿಗೆಗಳನ್ನು ಖಾಲಿ ಮಾಡುತ್ತಿದ್ದಾರೆ. ಮೂರು–ನಾಲ್ಕು ದಿನಗಳಲ್ಲಿ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಲಿದೆ. ಬಳಿಕ ಎಲ್ಲಾ ರೀತಿಯ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.