ADVERTISEMENT

ನೌಕರಿಗಾಗಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 8:55 IST
Last Updated 21 ಜನವರಿ 2012, 8:55 IST

ಬೀದರ್: ರಾಜ್ಯದಲ್ಲಿ ಸಿ ಮತ್ತು ಡಿ ದರ್ಜೆಯ ಸರ್ಕಾರಿ ಹುದ್ದೆಗಳಿಗೆ ವಯೋಮಿತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆಯು ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ‌್ಯಾಲಿ ನಡೆಸಿತು.

ನಗರದ ಕನ್ನಡಾಂಬೆ ವೃತ್ತದಲ್ಲಿ ಜಮಾಯಿಸಿದ ವೇದಿಕೆಯ ಕಾರ್ಯಕರ್ತರು ಅಲ್ಲಿಂದ ಕರಿಯಪ್ಪ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ನಿರುದ್ಯೋಗಿ ಪದವೀಧರರ ವಯೋಮಿತಿ ಮೀರುತ್ತಿರುವುದನ್ನು ಪರಿಗಣಿಸಿ ನೆರೆಯ ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ವಯೋಮಿತಿ ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ವರ್ಗದ ವಯೋಮಿತಿ 37 ವರ್ಷದಿಂದ 40, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ 40 ರಿಂದ 43 ಹಾಗೂ ಅಂಗವಿಕಲರ ವಯೋಮಿತಿ 43 ವರ್ಷದಿಂದ 45ಕ್ಕೆ ಹೆಚ್ಚಿಸಲಾಗಿದೆ. ಆಂಧ್ರಪ್ರದೇಶ ಸರ್ಕಾರ ಸಾಮಾನ್ಯ ವರ್ಗದ ವಯೋಮಿತಿ 34 ವರ್ಷದಿಂದ 36 ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಯೋಮಿತಿ 39 ವರ್ಷದಿಂದ 41ಕ್ಕೆ ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ನಿರುದ್ಯೋಗಿಗಳು ನೌಕರಿ ಪಡೆಯುವಂತಾಗಲು ಈ ಎರಡು ರಾಜ್ಯಗಳ ಮಾದರಿಯಲ್ಲಿ ರಾಜ್ಯದಲ್ಲಿ ವಯೋಮಿತಿ ಹೆಚ್ಚಿಸಬೇಕು. ಸಂಪುಟ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ ಎಸ್. ಪಾಟೀಲ್, ಜಿಲ್ಲಾ ಅಧ್ಯಕ್ಷ ಗಣೇಶರೆಡ್ಡಿ, ಪ್ರಮುಖರಾದ ಗುಂಡುರೆಡ್ಡಿ, ಶಿವಶಂಕರ ಗುನ್‌ಗುನೆ, ಸ್ಯಾಮಸನ್ ಮಂಗಲಪೇಟ್, ರತಿಕಾಂತ, ನಾಗರಾಜ, ಪ್ರವೀಣ, ಹರೀಶ, ಆನಂದ ನಂದಗಿ, ಜಗನ್ನಾಥ ಪಟ್ಟಣಶೆಟ್ಟಿ, ಸಚಿನ್ ಫರಹತಾಬಾದ್, ವಾಜೀದ್‌ಖಾನ್, ಶರಣು ಮಡಿವಾಳ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.