ಭಾಲ್ಕಿ: ಭಯೋತ್ಪಾದನೆ, ಭೃಷ್ಟಾಚಾರ, ಸ್ವಜನ ಪಕ್ಷಪಾತ, ನಿರುದ್ಯೋಗದಂಥ ಸಮಸ್ಯೆಗಳಿಂದ ಮುಕ್ತರಾಗಬೇಕಾದರೆ ಜಾಗೃತ ಜನತೆಯ ಸಹಕಾರ ಅವಶ್ಯಕ ಎಂದು ಶಾಸಕ ಈಶ್ವರ ಖಂಡ್ರೆ ಪ್ರತಿಪಾದಿಸಿದರು.
ಭಾಲ್ಕಿ ತಾಲ್ಲೂಕು ಅಡಳಿತದಿಂದ ಬುಧವಾರ ಆಯೋಜಿಸಿದ್ದ 66ನೇ ಸ್ವಾತಂತ್ರೋತ್ಸವ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆಗಳಲ್ಲಿ ಜಗತ್ತಿನಲ್ಲೇ ಒಂಬರ್ ಒನ್ ಪ್ರಗತಿಯತ್ತ ಭಾರತ ದಾಪುಗಾಲಿಡುತ್ತಿದೆ. 21ನೇ ಶತಮಾನ ಭಾರತೀಯರದ್ದು ಎಂಬಂಥ ಹೆಮ್ಮೆ ನಮಗಿದೆ. ಆದರೆ ಕೆಲವು ಆಂತರಿಕ ಸಮಸ್ಯೆಗಳಿಂದ ನಮಗಿನ್ನೂ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಎಂದರು.
15 ದಿನಗಳಲ್ಲಿ ಹೊಸ ಬಸ್ ನಿಲ್ದಾಣದ ಆರಂಭ, ಕನ್ನಡ ಭವನದ ಉದ್ಘಾಟನೆ, ನೀರಾವರಿ ಸೌಲಭ್ಯ ಸೇರಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿರುವದಾಗಿ ಹೇಳಿದರು.
ಡಾ. ಬಸಲಿಂಗ ಪಟ್ಟದ್ದೇವರು ಮಾತನಾಡಿ, ರಾಷ್ಟ್ರಪ್ರೇಮ ಎಂಬುದು ಎಲ್ಲರ ಅಂತರಾಳದಿಂದ ಹೊರ ಹೊಮ್ಮಬೇಕು ಎಂದರು. ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳನ್ನು, ಉತ್ತಮ ಸೇವಾ ಸಾಧಕರನ್ನು ಸತ್ಕರಿಸಲಾಯಿತು. ಮಕ್ಕಳ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮಾಜಿ ಉಪಸಭಾಪತಿ ಕೇಶವರಾವ ನಿಟ್ಟೂರಕರ್, ಪ್ರೊ. ಮೀನಾಕುಮಾರಿ ಪಾಟೀಲ ಉಪನ್ಯಾಸ ಮಂಡಿಸಿದರು. ಇದಕ್ಕೂ ಮುನ್ನ ಸಚಿವ ವಿಲಾಸರಾವ ದೇಶಮುಖ್, ಮಾಜಿ ಸಚಿವರಾಗಿದ್ದ ಭಾಲ್ಕಿಯ ಸುಭಾಷ ಅಷ್ಟೂರೆ, ಸ್ವತಂತ್ರ ಹೋರಾಟಗಾರ ಹಣಮಂತರಾವ ಜಾಧವ, ವೀರಸಂಗಪ್ಪ ಅವರ ನಿಧನಕ್ಕೆ ಸಭೆ ಶೃದ್ಧಾಂಜಲಿ ಅರ್ಪಿಸಿತು. ಪುರಸಭೆ ಅಧ್ಯಕ್ಷೆ ವಿದ್ಯಾವತಿ ಲೋಖಂಡೆ, ಉಪಾಧ್ಯಕ್ಷ ಚಂದ್ರಕಾಂತ ಪಾಟೀಲ, ತಾಪಂ ಅಧ್ಯಕ್ಷ ಅಂಬಣ್ಣ ವಗದಾಳೆ, ಪ್ರಕಾಶ ಡೋಂಗ್ರೆ, ಕೆ.ಬಿ. ಗೋಖಲೆ, ರಾಮರಾವ ಕುಲಕರ್ಣಿ ವೇದಿಕೆಯಲ್ಲಿ ಇದ್ದರು. ತಹಸೀಲ್ದಾರ ಶರಣಬಸಪ್ಪ ಸ್ವಾಗತಿಸಿದರು. ಗಣಪತರಾವ ಕಲ್ಲೂರೆ ನಿರ್ವಹಿಸಿದರು. ಬಿಇಓ ಎಚ್.ಡಿ. ಹುನಗುಂದ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.