ADVERTISEMENT

ಬಂಡಾಯಕ್ಕೆ ಪ್ರಕಾಶ ಖಂಡ್ರೆ, ಚಂದ್ರಾಸಿಂಗ್‌ ಸಿದ್ಧತೆ

ಜಿಲ್ಲೆಯಲ್ಲಿ ಜೆಡಿಎಸ್‌ನತ್ತ ಮುಖ ಮಾಡಿದ ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್‌ ವಂಚಿತರು

ಚಂದ್ರಕಾಂತ ಮಸಾನಿ
Published 18 ಏಪ್ರಿಲ್ 2018, 5:57 IST
Last Updated 18 ಏಪ್ರಿಲ್ 2018, 5:57 IST

ಬೀದರ್‌: ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್‌ ವಂಚಿತ ಕೆಲವು ಪ್ರಭಾವಿ ಮುಖಂಡರು ಬೆಂಬಲಿಗರೊಂದಿಗೆ ಸಮಾಲೋಚಿಸಿ ಪಕ್ಷಾಂತರಕ್ಕೆ ತಯಾರಿ ನಡೆಸುತ್ತಿದ್ದರೆ, ಇನ್ನು ಕೆಲವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ ದೊರೆಯದ ಕಾರಣ ತೀವ್ರ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಎನ್‌. ಧರ್ಮ
ಸಿಂಗ್‌ ಅಳಿಯ ಚಂದ್ರಾಸಿಂಗ್‌ ಹಾಗೂ ಭಾಲ್ಕಿಯ ಬಿಜೆಪಿ ಟಿಕೆಟ್‌ ವಂಚಿತ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ಬಂಡಾಯ ಅಭ್ಯರ್ಥಿಯಾಗಿ  ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

ಈ ಇಬ್ಬರೂ ಮುಖಂಡರು ಮಂಗಳವಾರ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಕಾಯಂ ಆಗಿ ರಾಜಕೀಯದಿಂದ ದೂರ ಉಳಿಯ ಬೇಕಾಗಲಿದೆ. ಹೀಗಾಗಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದೇ ಲೇಸು ಎನ್ನುವ ಸಲಹೆಯನ್ನು ಬೆಂಬಲಿಗರು ನೀಡಿದ್ದಾರೆ ಎನ್ನಲಾಗಿದೆ.

ADVERTISEMENT

ಚಂದ್ರಾಸಿಂಗ್‌ಗೆ ಬಿಜೆಪಿ ಗಾಳ?: ಕಾಂಗ್ರೆಸ್‌ ಟಿಕೆಟ್‌ ತಪ್ಪಿದ ನಂತರ ಬಿಜೆಪಿ ಮುಖಂಡರು ಚಂದ್ರಾಸಿಂಗ್‌ ಅವರನ್ನು ಸಂಪರ್ಕಿಸಿ ಆಹ್ವಾನ ನೀಡಿದ್ದಾರೆ. ಬಿಜೆಪಿಗೆ ಬರುವುದಾದರೆ ಬೀದರ್‌ ದಕ್ಷಿಣ ಕ್ಷೇತ್ರದ ಟಿಕೆಟ್‌ ಬಿಟ್ಟುಕೊಡುವ ಭರವಸೆಯನ್ನೂ ನೀಡಿದ್ದಾರೆ. ಆದರೆ, ಚಂದ್ರಾಸಿಂಗ್‌ ಅವರು ಬಿಜೆಪಿ ಮುಖಂಡರಿಗೆ ಯಾವುದೇ ಭರವಸೆ ಕೊಟ್ಟಿಲ್ಲ ಎನ್ನಲಾಗಿದೆ.

ಚಂದ್ರಾಸಿಂಗ್ ಎಂಟು ವರ್ಷಗಳಿಂದ ಬೀದರ್‌ ದಕ್ಷಿಣ ಕ್ಷೇತ್ರದ ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿದ್ದಾರೆ. ಅವರದ್ದೇ ಆದ ಕಾರ್ಯಕರ್ತರ ಪಡೆಯೂ ಇದೆ. ಕಾಂಗ್ರೆಸ್‌ನ ಅಶೋಕ ಖೇಣಿ ಹಾಗೂ ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಅವರಿಗೆ ಚಂದ್ರಾಸಿಂಗ್‌ ಮಾತ್ರ ಪ್ರಬಲ ಪೈಪೋಟಿ ನೀಡಲು ಸಾಧ್ಯವಿದೆ. ಹೀಗಾಗಿ ಚಂದ್ರಾಸಿಂಗ್‌ ಮನವೊಲಿಸಿ ತರುವಂತೆ ಸ್ಥಳೀಯ ಮುಖಂಡರ ಮೇಲೆ ಒತ್ತಡ ಹಾಕಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.

ಶೈಲೇಂದ್ರಗೆ ಟಿಕೆಟ್ ತಪ್ಪುವ ಸಾಧ್ಯತೆ?: ಶೈಲೇಂದ್ರ ಬೆಲ್ದಾಳೆ ಈಗಾಗಲೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಅವರ ತಾಯಿ ಶಕುಂತಲಾ ಬೆಲ್ದಾಳೆ ಬಿಜೆಪಿಯ ಜಿಲ್ಲಾ ಪಂಚಾಯಿತಿ ಸದಸ್ಯೆ. ಶೈಲೇಂದ್ರಗೆ ಟಿಕೆಟ್‌ ಕೊಟ್ಟರೆ ಬಿಜೆಪಿಯನ್ನು ಪೂರ್ಣಪ್ರಮಾಣದಲ್ಲಿ ಬೆಲ್ದಾಳೆ ಕುಟುಂಬಕ್ಕೆ ಬಳಸಿಕೊಂಡಂತೆ ಆಗುತ್ತದೆ. ಆದ್ದರಿಂದ ಬೇರೊಬ್ಬರಿಗೆ ಟಿಕೆಟ್‌ ಕೊಡುವಂತೆ ಕೆಲವು ಮುಖಂಡರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಹಿಂದೆ ಬೀದರ್‌ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕ್ಷೇತ್ರದ ಅಭ್ಯರ್ಥಿ ಇವರೇ ಎಂದು ಶೈಲೇಂದ್ರ ಅವರತ್ತ ಬೊಟ್ಟು ಮಾಡಿ ತೋರಿಸಿದ್ದರು. ಆದರೆ, ಈಗ ಅವರ ಹೆಸರು ಪ್ರಕಟಿಸಲು ಹಿಂದೇಟು ಹಾಕುತ್ತಿದ್ದಾರೆ. ಚಂದ್ರಾಸಿಂಗ್‌ ಬಿಜೆಪಿಗೆ ಬಂದರೆ ಸಹಜವಾಗಿಯೇ ಶೈಲೇಂದ್ರ ಅವರಿಗೆ ಟಿಕೆಟ್‌ ತಪ್ಪಲಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

ಅಭ್ಯರ್ಥಿಗಳ ಶೋಧದಲ್ಲಿ ಜೆಡಿಎಸ್‌: ಭಾಲ್ಕಿ ಕ್ಷೇತ್ರದಲ್ಲಿ ಪ್ರಕಾಶ ಖಂಡ್ರೆ ಅವರಿಗೆ ಬಿಜೆಪಿ ಟಿಕೆಟ್‌ ದೊರೆತರೆ ಡಿ.ಕೆ.ಸಿದ್ರಾಮ ಜೆಡಿಎಸ್‌ಗೆ ಬರಲಿದ್ದಾರೆ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದ ಜೆಡಿಎಸ್‌ ಮುಖಂಡರಿಗೆ ನಿರಾಶೆಯಾಗಿದೆ.ಇಲ್ಲಿ ಜೆಡಿಎಸ್‌ ಮುಖಂಡರು ಹೊಸ ಅಭ್ಯರ್ಥಿಯ ಶೋಧದಲ್ಲಿ ತೊಡಗಿದ್ದಾರೆ. ಪ್ರಕಾಶ ಖಂಡ್ರೆ ಅವರು ಶಿವಸೇನೆಯಿಂದ ಸ್ಪರ್ಧಿಸಿ ಮರಾಠ ಮತಗಳನ್ನು ಸೆಳೆದು ಗೆಲ್ಲುವ ಆಲೋಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಮರಾಠರಿಗೆ ಒಂದೂ ಟಿಕೆಟ್‌ ಕೊಟ್ಟಿಲ್ಲ. ಮರಾಠಾ ಸಮಾಜದ ಬೇಡಿಕೆಗಳಿಗೂ ಸ್ಪಂದಿಸಿಲ್ಲ.  ಶಾಸಕರು ಭಾಲ್ಕಿ ಎಪಿಎಂಸಿ ಚುನಾವಣೆಯಲ್ಲಿ ಮರಾಠ ಸಮಾಜದ ಅಭ್ಯರ್ಥಿ ಸೋಲುವಂತೆ ಮಾಡಿದ್ದಾರೆ. ಅವರ ಕ್ರೋದವನ್ನು ಶಮನಗೊಳಿಸುವ ಪ್ರಯತ್ನ ನಡೆದಿಲ್ಲ. ಹೀಗಾಗಿ ಶಿವಸೇನೆಯಿಂದ ಸ್ಪರ್ಧಿಸುವಂತೆ ಆಪ್ತರು ಪ್ರಕಾಶ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಕಾಶ ಅವರು ಶಿವಸೇನೆಯಿಂದ ಸ್ಪರ್ಧಿಸುವರೋ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವರೋ ಎನ್ನುವುದನ್ನು ಕಾದು ನೋಡಬೇಕಿದೆ.

ಜೆಡಿಎಸ್‌, ಬೀದರ್‌ ಕ್ಷೇತ್ರವನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟಿದೆ. ಔರಾದ್, ಬಸವಕಲ್ಯಾಣ ಹಾಗೂ ಭಾಲ್ಕಿಯಲ್ಲಿ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿಗಳು ದೊರೆತ್ತಿಲ್ಲ. ಈಗಲೂ ಅಭ್ಯರ್ಥಿಗಳ ಶೋಧದಲ್ಲಿ ತೊಡಗಿದೆ.

‘ಪಿ.ಜಿ.ಆರ್‌. ಸಿಂಧ್ಯ ಬಸವಕಲ್ಯಾಣದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರನ್ನು ಸಂಪರ್ಕಿಸಿ ಜೆಡಿಎಸ್‌ನಿಂದ ಭಾಲ್ಕಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವಂತೆ ಆಹ್ವಾನ ನೀಡಿದ್ದೇವೆ. ಕಳೆದ ಚುನಾವಣೆಯಲ್ಲಿ ಔರಾದ್‌ ಕ್ಷೇತ್ರದಿಂದ ಕೆಜೆಪಿಯಿಂದ ಸ್ಪರ್ಧಿಸಿದ್ದ ಧನಾಜಿ ಜಾಧವ ಸಹ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಬಸವಕಲ್ಯಾಣದ ಮಾಜಿ ಶಾಸಕ ಮಾರುತಿರಾವ್‌ ಮುಳೆ ಮಂಗಳವಾರ ಜೆಡಿಎಸ್‌ಗೆ ಸೇರಿದ್ದಾರೆ. ಸದ್ಯಕ್ಕೆ ಪಕ್ಷವು ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕಾರಣ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿಲ್ಲ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳುತ್ತಾರೆ.

ಪಕ್ಷಗಳು ಸಜ್ಜು

ಜಿಲ್ಲೆಯ ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಕಾಂಗ್ರೆಸ್‌ನಿಂದ ರಹೀಂ ಖಾನ್, ಬಿಜೆಪಿಯಿಂದ ಸೂರ್ಯಕಾಂತ ನಾಗಮಾರಪಳ್ಳಿ, ಜೆಡಿಎಸ್‌– ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾರಸಂದ್ರ ಮುನಿಯಪ್ಪ, ಅಖಿಲ ಭಾರತ ಮಹಿಳಾ ಎಂಪಾವರ್‌ಮೆಂಟ್‌ ಪಾರ್ಟಿ (ಎಐಎಂಇಒಪಿ)ಯಿಂದ ನಿಸಾರ್‌ ಖಾನ್ ಕಣಕ್ಕೆ ಇಳಿಯಲಿದ್ದು, ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.

**

ಬಿಜೆಪಿ ಹಾಗೂ ಕಾಂಗ್ರೆಸ್‌ ಮರಾಠ ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟಿಲ್ಲ. ಸಮಾಜದ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು - ದಿಗಂಬರರಾವ್‌ ಮಾನಕರಿ, ಕ್ಷತ್ರೀಯ ಮರಾಠ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.