ADVERTISEMENT

ಬರಗಾಲದಲ್ಲೂ ಜಲಾಶಯ ನೀರು ವ್ಯರ್ಥ

ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆ ಕತೆಯಿದು

ಜಗನ್ನಾಥ ಶೇರಿಕಾರ
Published 3 ಸೆಪ್ಟೆಂಬರ್ 2016, 8:44 IST
Last Updated 3 ಸೆಪ್ಟೆಂಬರ್ 2016, 8:44 IST
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ನೀರಾವರಿ ಯೋಜನೆ ಜಲಾಶಯದ ನೀರು ಸ್ಲುಯಿಸ್‌ ಗೇಟ್‌ ಸೋರಿಕೆಯಿಂದ ವ್ಯರ್ಥ ಕಾಲುವೆಗೆ ಹರಿದು ಪೋಲಾಗುತ್ತಿದೆ
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ನೀರಾವರಿ ಯೋಜನೆ ಜಲಾಶಯದ ನೀರು ಸ್ಲುಯಿಸ್‌ ಗೇಟ್‌ ಸೋರಿಕೆಯಿಂದ ವ್ಯರ್ಥ ಕಾಲುವೆಗೆ ಹರಿದು ಪೋಲಾಗುತ್ತಿದೆ   

ಚಿಂಚೋಳಿ: ಜಿಲ್ಲೆಯ ಯಶಸ್ವಿ ನೀರಾವರಿ ಯೋಜನೆ ಎಂಬ ಖ್ಯಾತಿ ಹೊಂದಿರುವ ಮಧ್ಯಮ ಹಾಗೂ ಭಾರಿ ಯೋಜನೆಗಳಲ್ಲಿ ಒಂದಾದ ತಾಲ್ಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆ ಜಲಾಶಯದ ನೀರು ವ್ಯರ್ಥ ಪೋಲಾಗುತ್ತಿದೆ.

ರಾಜ್ಯದಲ್ಲಿ ಮತ್ತೊಮ್ಮೆ ತೀವ್ರ ಬರಗಾಲ ಎದುರಾದಾಗಲೂ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಪ್ರಸಕ್ತ ಮಳೆಗಾಲದಲ್ಲಿ ಜಲಾಶಯಕ್ಕೆ ಸುಮಾರು 24 ಅಡಿ ನೀರು ಹರಿದು ಬಂದಿದೆ. ಸದ್ಯ ಜಲಾಶಯದಲ್ಲಿ ಸಮುದ್ರ ಮಟ್ಟದಿಂದ 1610 ಅಡಿ ನೀರಿನ ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನೂ 8 ಅಡಿ ಮಾತ್ರ ಬಾಕಿಯಿದೆ.

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಕನಸಿನ ಕೂಸಾದ ಈ ಯೋಜನೆ ಜಿಲ್ಲೆಯಲ್ಲೇ ಮೊಟ್ಟ ಮೊದಲು ಪೂರ್ಣಗೊಂಡ ಯೋಜನೆ. ಇದರಿಂದ 5223 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿರುವ ಯೋಜನೆಗೆ ಬಚಾವತ್‌ ಹೈ ತೀರ್ಪಿನ ಅನ್ವಯ ಯೋ ಜನೆ 1.95 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.

ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ನೀರು ಹರಿಸುವ ಸ್ಲಯಿಸ್‌ ಗೇಟ್‌(ಜಲಾಶಯದ ಒಳ ಬಾವಿ)ಗಳಲ್ಲಿ ಸೋರಿಕೆ ಕಂಡು ಬಂದಿದೆ. ಇದರಿಂದ ಭಾರಿ ಪ್ರಮಾಣ ದಲ್ಲಿ ನೀರು ವ್ಯರ್ಥ ಪೋಲಾಗುತ್ತಿದೆ.

ಎಡದಂಡೆ ನಾಲೆ ಆಧುನಿಕರಣ ಕಾಮಗಾರಿ 4 ಕಿ.ಮೀ ಉದ್ದ ನಡೆ ಯುತ್ತಿದ್ದು, 4 ತಿಂಗಳಿ ನಿಂದ ಆಮೆ ನಡಿಗೆಯಲ್ಲಿ ಸಾಗಿದೆ ಎಂದು ರೈತರು ದೂರಿದ್ದಾರೆ.ಸ್ಲುಯಿಸ್‌ ಗೇಟ್‌ ದುರಸ್ತಿ ಮಾಡಿ ನೀರಿನ ಸೋರಿಕೆ ತಡೆಯಬೇಕು. ಸಧ್ಯ ಜಲಾಶಯದಲ್ಲಿ ಅರ್ಧದಷ್ಟು ನೀರಿದೆ. ಸೋರಿಕೆ ಹಾಗೆಯೆ ಬಿಟ್ಟರೆ ಜಲಾಶಯದ ನೀರು ಖಾಲಿಯಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡ ಮೈನುದ್ದಿನ್‌ ಚಿಂಚೋಳಿ ಆತಂಕ ವ್ಯಕ್ತಪಡಿಸಿದ್ದಾರೆ.

ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು, ನೀರಿನಲ್ಲಿ ಮುಳುಗಿ ಸೋರಿಕೆ ತಡೆಯುವ ಕೆಲಸ ಮಾಡುವ  ಪರಿಣತಿ ಪಡೆದ ತಜ್ಞರನ್ನು ಕರೆಸಿ ದುರಸ್ತಿ ಮಾಡಿ ನೀರು ಪೋಲಾಗುವುದು ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ಬಂಡ್‌ನ ಒಳ ಭಾಗ ಹಾಗೂ ಹೊರ ಭಾಗದಲ್ಲಿ ಬೆಳೆದ ಗಿಡಿಗಂಟೆ ತೆರವುಗೊಳಿಸಿ ಯೋಜನೆ ನವಿಕರಿ ಸಬೇಕು ಹಾಗೂ ಕಾಲುವೆ ನವಿಕರಣ ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪುರ ಒತ್ತಾಯಿಸಿದ್ದಾರೆ.

ಜಲಾಶಯದಿಂದ ನೀರು ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ದುರಸ್ತಿ ಮಾಡಲು ಆಧೀನ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಇನ್ನೂ ನೀರಿನ ಸೋರಿಕೆ ಮುಂದುವದರೆ ದುರಸ್ತಿ ಮಾಡಿಸಿ ನೀರು ಪೋಲಾಗು ವುದು ತಡೆಯಲಾಗುವುದು ಎಂದು ಕಲಬುರ್ಗಿ ನೀರಾವರಿ ವಲಯದ ಮುಖ್ಯ ಎಂಜಿನಿಯರ್‌ ಜಗನ್ನಾಥ ವಿ. ಹಾಲಿಂಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.