ADVERTISEMENT

ಬೀದರ್: ಶಾಸಕನಾಗುವ ಕನಸು ಕಂಡಿರಲಿಲ್ಲ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 6:59 IST
Last Updated 15 ಮಾರ್ಚ್ 2018, 6:59 IST
ಅಶೋಕ ಖೇಣಿ
ಅಶೋಕ ಖೇಣಿ   

ಬೀದರ್: ‘ನಾನು ಶಾಸಕನಾಗುವ ಕನಸು ಕಂಡಿರಲಿಲ್ಲ. ಜನ ಕಲ್ಯಾಣಕ್ಕಾಗಿ ರಾಜಕೀಯಕ್ಕೆ ಬಂದೆ. ಮತದಾರರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾದೆ’ ಎಂದು ಮಾತು ಶುರು ಮಾಡಿದರು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ ಖೇಣಿ.

‘ನಮ್ಮ ಪರಿವಾರದ ನರೇಂದ್ರ ಖೇಣಿ ವಿಧಾನಪರಿಷತ್ ಸದಸ್ಯರಾಗಿದ್ದರು. ಅವರ ನಂತರ ಶಾಸಕನಾಗಿ ಆಯ್ಕೆಯಾದದ್ದು ನಾನೇ. ಶಾಸಕನಾಗಿ ಆಯ್ಕೆಯಾದಾಗ ಬಹಳ ಖುಷಿಯಾಗಿತ್ತು. ಅಷ್ಟೇ ಕುತೂಹಲ, ನಿರೀಕ್ಷೆಗಳೂ ಇದ್ದವು’ ಎಂದು ಹೇಳಿದರು.

‘ಹಿಂದೆ ನಾನು ವಿಧಾನಸೌಧಕ್ಕೆ ಹೋಗಿರಲಿಲ್ಲ. ಶಾಸಕನಾಗಿ ಮೊದಲ ಬಾರಿಗೆ ವಿಧಾನಸೌಧಕ್ಕೆ ಹೋದಾಗ ಎಲ್ಲಿ ಕೂಡಬೇಕು ಎನ್ನುವುದು ಗೊತ್ತಿರಲಿಲ್ಲ. ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ನನ್ನನ್ನು ಶಾಸಕರ ಕುರ್ಚಿ ಮೇಲೆ ಕೂಡಿಸಿದರು’ ಎಂದು ಸ್ಮರಿಸಿಕೊಂಡರು.

ADVERTISEMENT

‘ಶಾಸನಸಭೆಯ ವ್ಯವಸ್ಥೆ ಬಗೆಗೆ ಮಾಹಿತಿ ಇರಲಿಲ್ಲ. ಏನು ಮಾತಾಡಬೇಕು ಎನ್ನುವುದೂ ತಿಳಿಯಲಿಲ್ಲ. ನಾಲ್ಕು-ಐದು ಬಾರಿ, ಅದಕ್ಕೂ ಹೆಚ್ಚು ಬಾರಿ ಗೆದ್ದವರು ಅಲ್ಲಿದ್ದರು. ಮಾತನಾಡುವುದರಲ್ಲಿ ನಿಪುಣರಾಗಿದ್ದರು. ಅವರ ಮಾತು ಕೇಳಿ ಹಾಗೆ ಮಾತನಾಡಬೇಕು ಅನ್ನಿಸುತ್ತಿತ್ತು. ನಾನೂ ಮಾತನಾಡಲು ಶುರು ಮಾಡಿದೆ. ನನಗೆ ಸುಳ್ಳು ಹೇಳಲು ಆಗುತ್ತಿರಲಿಲ್ಲ. ನಾನು ಸತ್ಯ ಹೇಳಿದ್ದು ಅನೇಕರಿಗೆ ಅರಗಿಸಿಕೊಳ್ಳಲು ಆಗಲಿಲ್ಲ’ ಎಂದು ತಮ್ಮ ಅನುಭವ ಹಂಚಿಕೊಂಡರು.

‘ಹೊರಗಡೆ ಬೇರೆ ಬೇರೆ ಪಕ್ಷದವರು ಅನ್ನಿಸಿದರೂ ವಿಧಾನಸಭೆಯ ಒಳಗೆ ಒಂದೇ ಎನ್ನುವಂತೆ ಇರುತ್ತಿದ್ದರು. ಕೆಲವರು ತಾವು ಜನರ ಬಾಸ್ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ನಾನು ಮಾತ್ರ ನನ್ನನ್ನು ಶಾಸನಸಭೆಗೆ ಕಳುಹಿಸಿದ ಜನರನ್ನೇ ಬಾಸ್ ಎಂದು, ನಾನು ಸೇವಕ ಎಂದು ಹೇಳಿಕೊಳ್ಳುತ್ತಿದ್ದೆ’ ಎಂದರು.

‘ಅನೇಕರು ವಿಧಾನಸಭೆಯಲ್ಲಿ ಮಲಗಿದರು. ಆದರೆ, ಜನ ನಮ್ಮನ್ನು ಆರಿಸಿ ಕಳಿಸಿದ್ದು ಅಲ್ಲಿ ಮಲಗುವುದಕ್ಕಲ್ಲ, ಅವರ ಪರವಾಗಿ ಧ್ವನಿ ಎತ್ತುವುದಕ್ಕೆ ಎನ್ನುವುದು ನನ್ನ ನಿಲುವು ಆಗಿತ್ತು’ ಎಂದು ತಿಳಿಸಿದರು.

‘ನಿಧಾನವಾಗಿ ಶಾಸನಸಭೆಯ ವ್ಯವಸ್ಥೆಗೆ ಹೊಂದಿಕೊಂಡೆ. ಸರ್ಕಾರದ ಯೋಜನೆಗಳು, ವ್ಯವಸ್ಥೆ ಬಗೆಗೆ ತಿಳಿದುಕೊಳ್ಳುತ್ತಾ ಹೋದೆ. ಈಗ ಶಾಸಕನಾಗಿ ಐದು ವರ್ಷವಾಗುತ್ತ ಬಂದರೂ ಇನ್ನೂ ತಿಳಿದುಕೊಳ್ಳುವುದು ಬಹಳಷ್ಟಿದೆ. ಹೀಗಾಗಿ ನಾನು ಹೊಸದನ್ನು ತಿಳಿದುಕೊಳ್ಳಲು ಎಂದೂ ಹಿಂದೇಟು ಹಾಕಿಲ್ಲ. ಶಾಸಕ ಸ್ಥಾನದ ಜವಾಬ್ದಾರಿ, ಸರ್ಕಾರದಿಂದ ಕ್ಷೇತ್ರಕ್ಕೆ ಹೆಚ್ಚು ಅನುದಾನ ತರುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗೆಗೆ ಈಗಲೂ ತಿಳಿದುಕೊಳ್ಳುತ್ತಲೇ ಇದ್ದೇನೆ’ ಎಂದು ವಿವರಿಸಿದರು.

‘ನಾನು ವಿರೋಧ ಪಕ್ಷದಲ್ಲಿದ್ದರೂ ಜನಪರ ಕಾಳಜಿ ಹೊಂದಿರುವ ಕಾರಣಕ್ಕೆ ಮುಖ್ಯಮಂತ್ರಿ ನನ್ನ ಕ್ಷೇತ್ರಕ್ಕೆ ಅನುದಾನ ಮಂಜೂರು ಮಾಡುತ್ತಿದ್ದರು. ನಾನು ಹೆಚ್ಚು ಅನುದಾನ ಮಂಜೂರು ಮಾಡಿಸಿಕೊಂಡು ಬಂದ ಬಗೆಗೆ ರಾಜ್ಯದ ಇತರ ಶಾಸಕರಿಗೆ ಅಚ್ಚರಿ ಇದೆ. ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ₹ 2,200 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ’ ಎಂದು ತಿಳಿಸಿದರು.

ತಾವೇ ಸ್ಥಾಪಿಸಿದ ಕರ್ನಾಟಕ ಮಕ್ಕಳ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿರುವ ಖೇಣಿ ಅವರು ಈಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಯಸಿದ್ದಾರೆ.

ಸಿರಿವಂತ ಕುಟುಂಬ
ಬೀದರ್ ತಾಲ್ಲೂಕಿನ ರಂಜೋಳ ಖೇಣಿ ಗ್ರಾಮದವರಾದ ಅಶೋಕ ಖೇಣಿ ಅವರದ್ದು ಸಿರಿವಂತ ಕುಟುಂಬ. ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದು ಹೈದರಾಬಾದ್‌ನ ಆಲ್ ಸೇಂಟ್ಸ್ ಶಾಲೆಯಲ್ಲಿ. ಪ್ರೌಢ ಶಿಕ್ಷಣ ಪೂರೈಸಿದ್ದು ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‌ನಲ್ಲಿ. ಸೂರತ್ಕಲ್‌ನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದರು. ನಂತರ ಅಮೆರಿಕದ ಡಬ್ಲ್ಯೂಪಿಐನಲ್ಲಿ ಮಾಸ್ಟರ್ ಡಿಗ್ರಿ ಪಡೆದರು.

ಅಮೆರಿಕದಲ್ಲಿ ಐದು ವರ್ಷಗಳ ಕಾಲ ರೈಲ್ವೆಯಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು. ನಂತರ ಐದು ವರ್ಷ ಅಲ್ಲಿಯೇ ಸ್ವಯಂ ಉದ್ಯೋಗ ಕೈಗೊಂಡರು. 1995ರಲ್ಲಿ ಸ್ವದೇಶಕ್ಕೆ ಮರಳಿ ನೈಸ್ ಯೋಜನೆಯನ್ನು ಕೈಗೆತ್ತಿಕೊಂಡರು.

*
ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಮೂಲಸೌಕರ್ಯಗಳನ್ನು ಒದಗಿಸಿದ್ದೇನೆ. ಜನ ಮತ್ತೆ ಆಶೀರ್ವದಿಸಿದರೆ ಉದ್ಯೋಗ ಸೃಷ್ಟಿ ಸೇರಿ ವಿವಿಧ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದ್ದೇನೆ.
-ಅಶೋಕ ಖೇಣಿ,
ಬೀದರ್ ದಕ್ಷಿಣ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.