ADVERTISEMENT

ಭಾಲ್ಕಿ ಜನರಿಗೆ ಭಾರತ್ ಗ್ಯಾಸ್ ಟ್ರಬಲ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 10:00 IST
Last Updated 18 ಫೆಬ್ರುವರಿ 2012, 10:00 IST

ಭಾಲ್ಕಿ: ಪಟ್ಟಣದಲ್ಲಿ ಅಡುಗೆ ಅನಿಲ ಸಮರ್ಪಕವಾಗಿ ವಿತರಣೆಯಾಗದೇ ಸಿಕ್ಕವರಿಗೆ ಸೀರುಂಡೆಯಂತಾಗಿದೆ. ಪ್ರತಿದಿನವೂ ಭಾರತ್ ಗ್ಯಾಸ್‌ನ ಗೋದಾಮಿನ ಮುಂದೆ ಹೊಡಿ ಬಡಿ ರಾದ್ಧಾಂತ ಸಾಮಾನ್ಯವಾಗಿ ಬಿಟ್ಟಿದೆ.

ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಅನಿವಾರ್ಯತೆ ತಲೆದೋರಿದೆ. ಸಾರ್ವಜನಿಕರು ನಿತ್ಯವೂ ಈ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ, ಸಹಾಯಕ ಆಯುಕ್ತರಿಗೆ ದೂರವಾಣಿ ಮೂಲಕ ದೂರು ನೀಡುತ್ತಿದ್ದರೂ ಜನರ ಬವಣೆ ತಪ್ಪುತ್ತಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಗೆ ಹಲವು ಗ್ರಾಹಕರು ಆಕ್ರೋಶದಿಂದ ತಮ್ಮ ಅಳಲನ್ನು ತೋಡಿಕೊಂಡರು.

ಬೆಳಗಾಗುವ ಮುನ್ನವೇ ಊರ ಹೊರಗಿರುವ ಗೋದಾಮಿನ ಮುಂದೆ ಖಾಲಿ ಸಿಲೆಂಡರ್ ಇಟ್ಟುಕೊಂಡು ಸಾಲು ಸಾಲಾಗಿ ಗ್ರಾಹಕರು ನಿಲ್ಲಬೇಕಾದ ಅನಿವಾರ್ಯತೆ ಉಂಟಾಗಿದೆ. ಉದ್ಯೋಗಿಗಳು ಸಿಲಿಂಡರ್‌ಗಾಗಿ ರಜೆ ಹಾಕಿ ಬಂದರೂ ಸಿಗುವ ಭರವಸೆ ಇಲ್ಲ. ಖಾಲಿ ಸಿಲಿಂಡರ್ ಹೊತ್ತು ಬಂದ ಮಹಿಳೆಯರು ಜನರ ನೂಕು ನುಗ್ಗಲಿನಲ್ಲಿ ಹೋಗಲಾಗದೇ ಸಾಕಷ್ಟು ಪರದಾಡುತ್ತಿದ್ದಾರೆ. 

ಈ ಅವ್ಯವಸ್ಥೆಗೆ ಜನ ಏನಂತಾರೆ?: ಲೋಡ್ ಸರಿಯಾಗಿ ಬರುತ್ತಿದ್ದರೂ ಕಾಳ ಸಂತೆಯಲ್ಲಿ ಸಿಲಿಂಡರ್‌ಗಳು ಹೆಚ್ಚು ಹಣಕ್ಕೆ ಮಾರಾಟವಾಗುತ್ತಿವೆ. ಹೊಟೇಲ್‌ಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬದಲು ಗ್ರಹ ಬಳಕೆಯ ಗ್ಯಾಸ್ ಬಳಸಲಾಗುತ್ತಿದೆ. ಇದನ್ನೆಲ್ಲಾ ನೋಡಿಯೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಆರೋಪವನ್ನು ಸಮರ್ಥಿಸುವಂತೆ ಕಳೆದ ಒಂದು ವರ್ಷದಿಂದ ಆಹಾರ ಇಲಾಖೆಯ  ಇನ್ಸ್‌ಪೆಕ್ಟರ್ ಹುದ್ದೆ ಖಾಲಿ ಇವೆ.

ಏಜೆನ್ಸಿ ಸ್ಪಷ್ಟೀಕರಣ ಏನು?: ಈ ಬಗ್ಗೆ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ರವಿ ಅವರನ್ನು ದೂರವಾಣಿಯಲ್ಲಿ `ಪ್ರಜಾವಾಣಿ~ ಸಂಪರ್ಕಿಸಿದೆ. ಅವರ ಪ್ರಕಾರ ಸುಮಾರು 8700 ಗ್ರಾಹಕರಿದ್ದಾರೆ. ಧಾರವಾಡದಿಂದ ಪ್ರತಿ ತಿಂಗಳು ಕೇವಲ 2500ರಿಂದ 3500ವರೆಗೆ ಮಾತ್ರ ಸಿಲಿಂಡರ್‌ಗಳು ಬರ‌್ತಾ ಇವೆಯಂತೆ.

ಹೀಗಾಗಿ ಸ್ವಲ್ಪ ತೊಂದರೆಯಾಗಿದೆ. ನಾಳೆಯಿಂದಲೇ ಪ್ರತಿದಿನ 200-250 ಗ್ರಾಹಕರ ಹೆಸರನ್ನು ನೊಂದಣಿ ಮಾಡಿಕೊಂಡು ಅವರ ವಿಳಾಸಕ್ಕೆ ತಲುಪಿಸುವದಾಗಿ ತಿಳಿಸಿದ್ದಾರೆ. ಎಲ್ಲರೂ ಒಂದೇ ಸಲ ಬಂದು ಗಲಾಟೆ ಮಾಡದೇ ತಾವು ನೊಂದಾಯಿಸಿದ ದಿನಾಂಕದವರೆಗೆ ಕಾಯುವ ಮೂಲಕ ಸಹಕರಿಸುವಂತೆ ರವಿ ಅವರು ಮನವಿ ಮಾಡಿದ್ದಾರೆ.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.