ADVERTISEMENT

ಮೆಲ್ಲನೆ ಗಾಲಿ ಕುರ್ಚಿ ಹತ್ತಿದರು...

​ಪ್ರಜಾವಾಣಿ ವಾರ್ತೆ
Published 13 ಮೇ 2018, 11:20 IST
Last Updated 13 ಮೇ 2018, 11:20 IST
ಬೀದರ್‌ನ ಜಿಲ್ಲಾ ಪಂಚಾಯಿತಿ ಕಚೇರಿಯ ಕಟ್ಟಡದಲ್ಲಿ ಸ್ಥಾಪಿಸಲಾಗಿದ್ದ ಅಂಗವಿಕಲ ಸಿಬ್ಬಂದಿ ಕಾರ್ಯನಿರ್ವಹಿಸಿದ ಮತಗಟ್ಟೆಗೆ ಮತ ಚಲಾಯಿಸಲು ಬಂದ ಮಹಿಳೆ
ಬೀದರ್‌ನ ಜಿಲ್ಲಾ ಪಂಚಾಯಿತಿ ಕಚೇರಿಯ ಕಟ್ಟಡದಲ್ಲಿ ಸ್ಥಾಪಿಸಲಾಗಿದ್ದ ಅಂಗವಿಕಲ ಸಿಬ್ಬಂದಿ ಕಾರ್ಯನಿರ್ವಹಿಸಿದ ಮತಗಟ್ಟೆಗೆ ಮತ ಚಲಾಯಿಸಲು ಬಂದ ಮಹಿಳೆ   

ಬೀದರ್: ಬಿಸಿಲಲ್ಲಿ ಬಂದವರು ಕೆಲ ಹೊತ್ತು ಸೋಫಾ ಮೇಲೆ ಕುಳಿತರು. ತಣ್ಣನೆಯ ಶುದ್ಧ ನೀರು ಕುಡಿದರು. ಮೆಲ್ಲನೆ ಗಾಲಿ ಕುರ್ಚಿ ಹತ್ತಿದರು. ವೋಟಿಂಗ್ ಕಂಪಾರ್ಟ್‌ಮೆಂಟ್‌ ತಲುಪಿದರು. ಮತ ಚಲಾಯಿಸಿ ಸಂತಸದಿಂದ ಹೊರ ಬಂದರು.

ಇದೆಲ್ಲ ಕಂಡು ಬಂದದ್ದು ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಅಂಗವಿಕಲರಿಗಾಗಿ ಸ್ಥಾಪಿಸಿದ್ದ ಮತಗಟ್ಟೆ ಕೇಂದ್ರದಲ್ಲಿ. ಚುನಾವಣಾ ಆಯೋಗವು ಈ ಬಾರಿಯ ಚುನಾವಣೆಯಲ್ಲಿ ಆಯ್ದ ಸ್ಥಳಗಳಲ್ಲಿ ಮಾದರಿ, ಪಿಂಕ್ ಹಾಗೂ ಅಂಗವಿಕಲ ಮತಗಟ್ಟೆಗಳನ್ನು ಸ್ಥಾಪಿಸಿ ವಿಭಿನ್ನ ಪ್ರಯೋಗ ಮಾಡಿತ್ತು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಅಂಗವಿಕಲರಿಗಾಗಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಎಲ್ಲ ಮತದಾರರೂ ಮತ ಚಲಾಯಿಸಿದರು. ಮತಗಟ್ಟೆ ಕೇಂದ್ರದ ಪಕ್ಕದಲ್ಲಿ ಶಾಮಿಯಾನ ಹಾಕಲಾಗಿತ್ತು. ಅದರೊಳಗೆ ಸೋಫಾ, ಕುರ್ಚಿ, ಟೇಬಲ್, ತಂಪಾದ ಶುದ್ಧ ಕುಡಿಯುವ ನೀರಿನ ಕ್ಯಾನ್ ಇಡಲಾಗಿತ್ತು. ಸಮೀಪದಲ್ಲಿಯೇ ಗಾಲಿ ಕುರ್ಚಿಯೊಂದನ್ನು ನಿಲ್ಲಿಸಲಾಗಿತ್ತು.

ADVERTISEMENT

ಮತಗಟ್ಟೆಗೆ ಬಂದ ಮತದಾರರು ಸೋಫಾ ಮೇಲೆ ಸ್ವಲ್ಪ ಸಮಯ ಕುಳಿತು ತಂಪು ನೀರು ಕುಡಿದು ದಣಿವಾರಿಸಿಕೊಂಡರು. ಅಧಿಕಾರಿಗಳಿಂದ ತಮ್ಮ ಮತದಾರರ ಸಂಖ್ಯೆಯನ್ನು ಪಡೆದು ಕೇಂದ್ರದೊಳಗೆ ಪ್ರವೇಶಿಸಿ ಮತ ಹಕ್ಕು ಚಲಾಯಿಸಿದರು. ಅಂಗವಿಕಲರು ಗಾಲಿ ಕುರ್ಚಿ ನೆರವು ಪಡೆದು ಮತದಾನ ಮಾಡಿದರು. ಗಾಲಿ ಕುರ್ಚಿಯಲ್ಲಿ ಅಂಗವಿಕಲ ಮತದಾರರನ್ನು ಸಾಗಿಸುವುದಕ್ಕಾಗಿಯೇ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಅಂಗವಿಕಲರ ಮತಗಟ್ಟೆ ಹೊರಗೆ ಸ್ವಾಗತ ಕೋರುವ ಕಟೌಟ್ ಹಾಕಲಾಗಿತ್ತು. ಬಾಗಿಲುಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಒಳಗಡೆ ಫ್ಯಾನ್‌ಗಳನ್ನು ಅಳವಡಿಸಲಾಗಿತ್ತು. ಶೌಚಾಲಯ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು.ಮತಗಟ್ಟೆ ಅಧಿಕಾರಿಗಳಲ್ಲಿ ಒಬ್ಬರು ಅಂಗವಿಕಲ ಅಧಿಕಾರಿ ಕೂಡ ಇದ್ದರು.

ಮತಗಟ್ಟೆ ಕೇಂದ್ರದಲ್ಲಿ ಒಟ್ಟು 668 ಮತದಾರರ ಪೈಕಿ ಬೆಳಿಗ್ಗೆ 11 ಗಂಟೆ ವೇಳೆಗೆ ಐವರು ಅಂಗವಿಕಲರು ಸೇರಿದಂತೆ 162 ಜನ ಮತ ಚಲಾವಣೆ ಮಾಡಿದ್ದರು. ಮತಗಟ್ಟೆಯಲ್ಲಿ ಎಲ್ಲ ಸೌಕರ್ಯಗಳೂ ಇದ್ದ ಕಾರಣ ಮತದಾರರು ಖುಷಿ ಖುಷಿಯಿಂದ ಮತ ಚಲಾಯಿಸಿದರು ಎಂದು ಸೆಕ್ಟರ್ ಅಧಿಕಾರಿ ನೀಲಕಂಠ ಸ್ವಾಮಿ, ಬಿಎಲ್‍ಒ ಯುಸೂಫ್‌ಖಾನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.