ADVERTISEMENT

ರಸ್ತೆ ತಗ್ಗುಗಳ ಭರ್ತಿಗೆ ನಿಷ್ಕಾಳಜಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 8:55 IST
Last Updated 12 ಜನವರಿ 2012, 8:55 IST
ರಸ್ತೆ ತಗ್ಗುಗಳ ಭರ್ತಿಗೆ ನಿಷ್ಕಾಳಜಿ
ರಸ್ತೆ ತಗ್ಗುಗಳ ಭರ್ತಿಗೆ ನಿಷ್ಕಾಳಜಿ   

ಬಸವಕಲ್ಯಾಣ: ತಾಲ್ಲೂಕಿನ ಅನೇಕ ಕಡೆ ರಸ್ತೆಗಳಲ್ಲಿ ತಗ್ಗುಗಳು ಬಿದ್ದಿದ್ದರೂ ಅವುಗಳನ್ನು ಭರ್ತಿ ಮಾಡದ್ದರಿಂದ ವಾಹನ ಸಂಚಾರಕ್ಕೆ ಅಡೆತಡೆ ಆಗುತ್ತಿದೆ. ಈ ಕಾರಣ ಬಸ್ ಹಾಗೂ ಇತರೆ ವಾಹನಗಳು ಸರ್ಕಸ್ ಮಾಡುತ್ತ ಸಾವಕಾಶವಾಗಿ ಸಾಗುತ್ತಿದ್ದು ಪ್ರಯಾಣಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ತಿಂಗಳ ಹಿಂದೆ ಬೀದರ್‌ಗೆ ಆಗಮಿಸಿದ್ದ ಮುಖ್ಯಮಂತ್ರಿ ಸದಾನಂದ ಗೌಡರು ಡಿಸೆಂಬರ್ ಕೊನೆಯವಾರ ಇಲ್ಲವೆ ಜನವರಿ ಮೊದಲ ವಾರದವರೆಗೆ ಪ್ರತಿ ರಸ್ತೆಗಳಲ್ಲಿನ ತಗ್ಗುಗಳನ್ನು ಭರ್ತಿ ಮಾಡಬೇಕು ಎಂದು ಗಡುವು ವಿಧಿಸಿದ್ದರು. ಆದರೂ ಯಾವುದೇ ಅಧಿಕಾರಿ ಈ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ.
 
ರಸ್ತೆ ಸುಧಾರಣೆಗೆ ಹಣದ ಕೊರತೆ ಇಲ್ಲ. ಒಂದುವೇಳೆ ಹಣದ ಸಮಸ್ಯೆ ಇರುವ ಬಗ್ಗೆ ತಿಳಿಸಿದರೆ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರಾದರೂ ಅಧಿಕಾರಿಗಳು ಸುಮ್ಮನೆ ಏಕೆ ಕುಳಿತಿದ್ದಾರೆ. ಸಾಮಾನ್ಯ ಜನರ ಮಾತಿಗಂತೂ ಅಧಿಕಾರಿಗಳು ಕಿವಿಗೊಡುವುದಿಲ್ಲ. ಆದರೆ ಮುಖ್ಯಮಂತ್ರಿಗಳ ಮಾತಿಗೂ ಬೆಲೆ ಇಲ್ಲವೇ ಎಂದು ಜನರು ಕೇಳುತ್ತಿದ್ದಾರೆ.

ತಾಲ್ಲೂಕಿನ ಮುಚಳಂಬ -ಭಾಲ್ಕಿ ರಸ್ತೆ, ತೊಗಲೂರ- ಹುಲಸೂರ ರಸ್ತೆ, ಗಡಿಗೌಡಗಾಂವ ರಸ್ತೆ, ಉಮಾಪುರ ರಸ್ತೆ, ಮುಡಬಿ -ಶರಣನಗರ ರಸ್ತೆ, ಹಾರಕೂಡ ರಸ್ತೆ, ರಾಮತೀರ್ಥ ರಸ್ತೆಗಳಲ್ಲಿ ಅಲ್ಲಲ್ಲಿ ಡಾಂಬರು ಕಿತ್ತುಹೋಗಿದೆ.
ಕೆಲವೆಡೆ ಅರ್ಧ ಅಡಿಯಷ್ಟು ಆಳವಾದ ತಗ್ಗುಗಳು ಬಿದ್ದಿದ್ದರಿಂದ ದೊಡ್ಡ ವಾಹನ ಸಾಗಲು ಹರಸಾಹಸ ಮಾಡಬೇಕಾಗುತ್ತದೆ. ದ್ವಿಚಕ್ರ ವಾಹನಗಳನ್ನು ಇಂಥಲ್ಲಿ ಇಳಿದುಕೊಂಡು ಒಯ್ಯಬೇಕಾಗುತ್ತಿದೆ.
 
ಬಸವಕಲ್ಯಾಣದಿಂದ ಹುಲಸೂರಗೆ ಹೋಗುವ ರಸ್ತೆ, ಮುಡಬಿ- ಹಾರಕೂಡ ರಸ್ತೆಯಲ್ಲಿನ ತಗ್ಗುಗಳನ್ನು ತುಂಬಲಾಗುತ್ತಿದ್ದರೂ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಇದಲ್ಲದೆ ವಿಳಂಬ ಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಜನರು ದೂರಿದ್ದಾರೆ. ತಾಲ್ಲೂಕಿನಲ್ಲಿನ ಎಲ್ಲ ರಸ್ತೆಗಳಲ್ಲಿನ ತಗ್ಗುಗಳನ್ನು ಶೀಘ್ರ ತುಂಬಬೇಕು. ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಗಳಲ್ಲಿ ಡಾಂಬರೀಕರಣ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.