ADVERTISEMENT

`ವಚನ ಓದಿನಿಂದ ಜೀವನ ಸಾರ್ಥಕ'

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:08 IST
Last Updated 25 ಜೂನ್ 2013, 10:08 IST

ಬೀದರ್: ಶರಣರ ವಚನಗಳನ್ನು ಓದಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಸಲಹೆ ಮಾಡಿದರು.
ನಗರದ ಶರಣ ಉದ್ಯಾನದಲ್ಲಿ ಭಾನುವಾರ ನಡೆದ ಅಂಬಿಗರ ಚೌಡಯ್ಯನವರ ಸ್ಮರಣೋತ್ಸವ, ಪರಿಸರ ದಿನಾಚರಣೆ ಹಾಗೂ ಸಹಸ್ರ ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಚನಗಳು ಬದುಕಿಗೆ ಮಾರ್ಗದರ್ಶಿ ಆಗಿವೆ ಎಂದರು.

ನಗರದ ಬಸವಗಿರಿಯಲ್ಲಿ ನಿರ್ಮಿಸಲಾಗುತ್ತಿರುವ `ಗುರುವಚನ ಪರುಷ ಕಟ್ಟೆ'ಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.
ಶರಣ ಪರಂಪರೆಯಲ್ಲಿ ಜಾತಿಗಳಿಲ್ಲ, ಕಾಯಕಗಳಿವೆ  ಎಂದು ಪ್ರೊ. ಸಿದ್ಧಣ್ಣ ಲಂಗೋಟಿ ನುಡಿದರು. ಅಂಬಿಗರ ಚೌಡಯ್ಯನವರು ಮೂಢ ಆಚರಣೆಗಳನ್ನು ವಿರೋಧಿಸಿ ಜನರನ್ನು ಸತ್ಯದತ್ತ ಸೆಳೆಯಲು ಪ್ರಯತ್ನಿಸಿದ್ದರು. ಅವರ ವಚನಗಳನ್ನು ಆಚರಣೆಗೆ ತರುವ ಮೂಲಕ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕಿದೆ ಎಂದು ಹೇಳಿದರು.

ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುವುದೇ ಶರಣ ಧರ್ಮವಾಗಿದೆ. ಉತ್ತರಾಖಂಡ ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಎಲ್ಲರೂ ಉದಾರ ನೆರವು ನೀಡಿ ಮಾನವೀಯತೆ ಮೆರೆಯಬೇಕು ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮನವಿ ಮಾಡಿದರು. ಕರುಣೆ ಇಲ್ಲದವರ ಕೈಯಿಂದ ದೇವರು ಪೂಜೆ ಸ್ವೀಕರಿಸಲಾರ. ಸಕಲ ಜೀವರಾಶಿಗಾಗಿ ಸಲ್ಲಿಸುವ ಪೂಜೆ ನಿಜವಾದ ದೇವರ ಪೂಜೆ ಎಂದು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಗುಲ್ಬರ್ಗ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅವರನ್ನು ಅಭಿನಂದಿಸಲಾಯಿತು. `ವಚನ ವಿಜಯೋತ್ಸವ 2013' ಸಾಕ್ಷ್ಯಚಿತ್ರದ ಸಿ.ಡಿ.ಯನ್ನು ಪ್ರಮುಖರಾದ ಕಾಶಪ್ಪ ಧನ್ನೂರು ಬಿಡುಗಡೆ ಮಾಡಿದರು.
ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಹಸ್ರ ಸಸಿ ನೆಟ್ಟು ಬೆಳೆಸುವ ಸಂಕಲ್ಪ ತೊಡಲಾಯಿತು. ಅಲ್ಲದೆ, ಸಾಂಕೇತಿಕವಾಗಿ ಸಸಿಗಳನ್ನು ವಿತರಿಸಲಾಯಿತು.

ಉದ್ಯಮಿ ಜಯರಾಜ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಅಧಿಕಾರಿ ಶಿವಕುಮಾರ್ ರಾಠೋಡ್ ಇದ್ದರು. ಶಿವರಾಜ ಮದಕಟ್ಟೆ ಸ್ವಾಗತಿಸಿದರು. ಪ್ರಕಾಶ್ ಮಠಪತಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.