ADVERTISEMENT

`ವಚನ ಸಾಹಿತ್ಯ ಪಠ್ಯಪುಸ್ತಕದ ಭಾಗವಾಗಲಿ'

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 6:44 IST
Last Updated 2 ಏಪ್ರಿಲ್ 2013, 6:44 IST

ಬೀದರ್: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶರಣರ ವಚನ ಸಾಹಿತ್ಯ ಪಠ್ಯಪುಸ್ತಕದ ಭಾಗವಾಗಬೇಕು ಎಂದು ಬೆಂಗಳೂರಿನ ಬೇಂದ್ರೆ ಕಾವ್ಯಕೂಟದ ಅಧ್ಯಕ್ಷ ಜಿ. ಕೃಷ್ಣಪ್ಪ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗಾರಿ ಬಾರಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಸಂಘ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಬದುಕು ಹಿಂಸೆ, ಕ್ರೌರ್ಯಗಳಿಗೆ ಒಳಗಾಗುತ್ತಿದೆ. ಶರಣ ವಚನ ಸಾಹಿತ್ಯದಲ್ಲಿ ಇವುಗಳಿಗೆ ಪರಿಹಾರ ಇದೆ ಎಂದರು.
ಯುವ ಸಾಹಿತಿಗಳು ಅಭಿವೃದ್ಧಿಗೆ ಮಾರ್ಗದರ್ಶಿ ಆಗುವಂಥ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಮಾಜಿ ಸಚಿವರಾದ ಗುರುಪಾದಪ್ಪ ನಾಗಮಾರಪಳ್ಳಿ, ವೈಜಿನಾಥ ಪಾಟೀಲ್, ಶಾಸಕರಾದ ಈಶ್ವರ ಖಂಡ್ರೆ, ಬಂಡೆಪ್ಪ ಕಾಶೆಂಪೂರ್ ಹಾಗೂ ರಹೀಮ್‌ಖಾನ್ ಅವರನ್ನು ಸನ್ಮಾನಿಸಲಾಯಿತು.

ಹಾಸ್ಯ ಕಲಾವಿದ ಬಸವರಾಜ ಮಹಾಮನಿ ನಡೆಸಿಕೊಟ್ಟ ಹಾಸ್ಯ ಸಂಜೆ ಕಾರ್ಯಕ್ರಮ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು. ಹಿರಿಯ ಸಾಹಿತಿ ಪ್ರೊ. ವೀರೇಂದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಸಂಘದ ಅಧ್ಯಕ್ಷ ಪಂಚಾಕ್ಷರಿ ಪುಣ್ಯಶೆಟ್ಟಿ ನೇತೃತ್ವ ವಹಿಸಿದ್ದರು. ಬಸವಲಿಂಗ ಪಟ್ಟದೇವರು ಹಾಗೂ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಜಿಲ್ಲಾ ಪಂಚಾಯಿತಿ ಸದಸ್ಯ ಕುಶಾಲರಾವ್ ಪಾಟೀಲ್ ಗಾದಗಿ, ಡಾ. ಅಮರ್ ಎರೋಳಕರ್,  ಡಾ. ಬಸವರಾಜ ಬಲ್ಲೂರು ಇದ್ದರು.

ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ್ ಚನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಜನಾಥ ಸಜ್ಜನಶೆಟ್ಟಿ ನಿರೂಪಿಸಿದರು.
ಮಹಾಕ್ರಾಂತಿ: ಜಮುರಾ ಕಲಾಲೋಕದ ಕಲಾವಿದರು ಪ್ರಸ್ತುತಪಡಿಸಿದ ಕಲ್ಯಾಣ ಕ್ರಾಂತಿ ಕುರಿತ `ಮಹಾಕ್ರಾಂತಿ' ನಾಟಕ ಎಲ್ಲರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.