ADVERTISEMENT

ವಿದ್ಯುತ್ ಕಡಿತಗೊಳಿಸದಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 9:50 IST
Last Updated 11 ಮಾರ್ಚ್ 2011, 9:50 IST

ಬೀದರ್: ಜಿಲ್ಲೆಯಲ್ಲಿ ಇರುವ ಜಲ್ಲಿ ಕ್ರಷರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರುವಂತೆ ಜಿಲ್ಲಾ ಕಲ್ಲು ಜಲ್ಲಿ ಉತ್ಪಾದಕರ ಮತ್ತು ಕಲ್ಲು ಗಣಿದಾರರ ಸಂಘ ಆಗ್ರಹಿಸಿದೆ. ಸಂಘದ ಗೌರವಾಧ್ಯಕ್ಷ ಉಮಾಕಾಂತ ನಾಗಮಾಪರಳ್ಳಿ ಅವರ ನೇತೃತ್ವದ ನಿಯೋಗವು ಗುರುವಾರ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿತು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜಿಲ್ಲೆಯಲ್ಲಿ ಜಲ್ಲಿ ಕ್ರಷರ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

ಹೀಗಾಗಿ ಕ್ರಷರ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡದಿರುವಂತೆ ಪರಿಸರ ಹಾಗೂ ಮಾಲಿನ್ಯ ಮಂಡಳಿ ಮತ್ತು ಜೆಸ್ಕಾಂಗೆ ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಒಂದು ವೇಳೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಲ್ಲಿ ಈಗಾಗಲೇ ನಷ್ಟ ಅನುಭವಿಸುತ್ತಿರುವ ಕಲ್ಲು ಜಲ್ಲಿ ಉತ್ಪಾದಕರ ಮೇಲೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ. ಈಗಾಗಲೇ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ದಿಕ್ಕು ಪಾಲಾಗಲಿದ್ದಾರೆ. ಅಲ್ಲದೇ ಕೇಬಲ್, ಮೋಟಾರ್ ಮತ್ತು ಯಂತ್ರಗಳ ಕಳ್ಳತನದ ಸಾಧ್ಯತೆಗಳಿರುತ್ತವೆ.

ಆದ್ದರಿಂದ ವಿದ್ಯುತ್ ಕಡಿತಗೊಳಿಸದಂತೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಘದ ಅಧ್ಯಕ್ಷ ಭೀಮರಾವ ಪಾಟೀಲ್, ಉಪಾಧ್ಯಕ್ಷರಾದ ಎಸ್.ಬಿ. ಪಾಟೀಲ್, ಪ್ರಕಾಶ ಟೊಣ್ಣೆ, ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ಖಚಾಂಚಿ ಅನೂಪ, ಜಂಟಿ ಕಾರ್ಯದರ್ಶಿಗಳಾದ ಪ್ರಶಾಂತ ದೊಡ್ಡಿ, ಸೂರ್ಯಕಾಂತ ಅಲ್ಮಾಜಿ, ಎಂ.ಡಿ. ರಿಯಾಜ್, ವಿಜಯಕುಮಾರ ಪನಸಾಲಿ ಮತ್ತಿತರರು ನಿಯೋಗದಲ್ಲಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.