ADVERTISEMENT

ವೀರಶೈವ ಮಹಾಸಭಾಕ್ಕೆ ರಾಜೀನಾಮೆ: ನಿರ್ಧಾರ

ಬಸವ ಜಯಂತಿ: ಏ.15 ರಿಂದ ನಾಲ್ಕು ದಿನ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 6:29 IST
Last Updated 6 ಏಪ್ರಿಲ್ 2018, 6:29 IST

ಬೀದರ್: ಅಖಿಲ ಭಾರತ ವೀರಶೈವ ಮಹಾಸಭಾದ ಅಜೀವ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಲು ನಗರದ ಗಾಂಧಿಗಂಜ್‌ನ ಬಸವೇಶ್ವರ ದೇವಸ್ಥಾನದಲ್ಲಿ ಈಚೆಗೆ ನಡೆದ ಬಸವ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳ ಹಾಗೂ ಅಜೀವ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸುವ ವಿಚಾರವನ್ನು ಪ್ರಮುಖರಾದ ರಮೇಶ ಮಠಪತಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಪದಾಧಿಕಾರಿಗಳು ಸಹಮತ ವ್ಯಕ್ತಪಡಿಸಿದರು.

‘ಬಸವ ಜಯಂತಿ ಪ್ರಯುಕ್ತ ಏಪ್ರಿಲ್‌ 15 ರಿಂದ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಶರಣಪ್ಪ ಮಿಠಾರೆ ತಿಳಿಸಿದರು.‘ಏ. 15 ರಂದು ನಗರದಲ್ಲಿ ಬೈಕ್‌ ರ‍್ಯಾಲಿ, 16 ರಂದು ಬಸವ ಜಯಂತಿ ಉತ್ಸವ ಉದ್ಘಾಟನಾ ಸಮಾರಂಭ, 17 ರಂದು ಮಹಿಳಾ ಮತ್ತು ಮಕ್ಕಳ ಗೋಷ್ಠಿ ಹಾಗೂ 18 ರಂದು ಮೆರವಣಿಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದರು.

‘ಕಾರ್ಯಕ್ರಮಕ್ಕೆ ಡಾ. ಶಿವಾನಂದ ಜಾಮದಾರ, ಕೂಡಲಸಂಗಮದ ಮೃತ್ಯುಂಜಯ ಸ್ವಾಮೀಜಿ, ಬೆಳಮಗಿಯ ಚೆನ್ನಬಸವ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಅನೇಕ ಸಾಹಿತಿಗಳನ್ನು ಆಹ್ವಾನಿಸಲಾಗುವುದು’ ಎಂದು ಯುವ ಬಸವ ಕೇಂದ್ರದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದರು.

ADVERTISEMENT

ಪ್ರಧಾನ ಕಾರ್ಯದರ್ಶಿ ಬಸವರಾಜ ಧನ್ನೂರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕರುಣಾ ಶೆಟಕಾರ, ಶಕುಂತಲಾ ವಾಲಿ, ಅನಿಲ ಪನ್ನಾಳೆ, ಶಿವರಾಜ ಕಪಲಾಪುರೆ, ಸಂಜೀವಕುಮಾರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.